ಕ್ಷಯರೋಗ ನಿರ್ಮೂಲನಾ ದಿನ ಜಿಲ್ಲೆಯಲ್ಲಿ 100 ದಿನಗಳ ಕಾಲ ಕ್ಷಯರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಅಭಿಯಾನ

ಕ್ಷಯರೋಗ ನಿರ್ಮೂಲನಾ ದಿನ ಜಿಲ್ಲೆಯಲ್ಲಿ 100 ದಿನಗಳ ಕಾಲ ಕ್ಷಯರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಅಭಿಯಾನ

ಮಡಿಕೇರಿ ಮಾ.24:-ಜಿಲ್ಲೆಯಲ್ಲಿ ಒಂದು ಲಕ್ಷ ಜನಸಂಖ್ಯೆಗೆ 79 ಕ್ಷಯ ರೋಗಿಗಳಿದ್ದು, ಇನ್ನೂ ಎರಡು ವರ್ಷದಲ್ಲಿ ಕ್ಷಯಮುಕ್ತ ಜಿಲ್ಲೆಯನ್ನಾಗಿ ಮಾಡಬಹುದಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್ ಅವರು ತಿಳಿಸಿದ್ದಾರೆ.   

ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ನಡೆದ ವಿಶ್ವ ಕ್ಷಯರೋಗ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  

ಮುಂದಿನ ಒಂದು ವರ್ಷದಲ್ಲಿ ಒಂದು ಲಕ್ಷ ಜನರಿಗೆ ನಲ್ವತ್ತಕ್ಕಿಂತ ಕಡಿಮೆ ಕ್ಷಯ ರೋಗಿಗಳು ಕಂಡುಬರಲಿದ್ದು, ಸಂಪೂರ್ಣವಾಗಿ ಕ್ಷಯಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಅವರು ಕೋರಿದರು.  

ಕ್ಷಯರೋಗವನ್ನು ತಡೆಯುವಲ್ಲಿ 6 ರಿಂದ 7 ಲಕ್ಷ ರೂ. ವರೆಗೆ ಒಬ್ಬ ರೋಗಿಗೆ ಸರ್ಕಾರ ಭರಿಸಿ ಅತ್ಯುತ್ತಮ ಚಿಕಿತ್ಸೆ ನೀಡಲಿದೆ ಎಂದು ಡಾ.ಸನತ್ ಕುಮಾರ್ ಅವರು ಹೇಳಿದರು.

ಮುಂದಿನ ಪೀಳಿಗೆ ಕ್ಷಯ ರೋಗದಿಂದ ಬಳಲಬಾರದು, ಮೊಬೈಲ್ ಎಕ್ಸೆರೆ ಮೂಲಕವೂ ಕ್ಷಯವನ್ನು ಪತ್ತೆ ಹಚ್ಚಲಾಗುತ್ತಿದೆ, ಕಫ ಪರೀಕ್ಷೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಅವರು ಹೇಳಿದರು.

‘ಜಿಲ್ಲೆಯ ಸೂಕ್ಷ್ಮ ಪ್ರದೇಶಗಳ ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯಕ್ರಮವು ಮಂಗಳವಾರದಿಂದ 100 ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಕ್ಷಯರೋಗ ಪತ್ತೆ ಹಚ್ಚುವುದರ ಜತೆಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಅವರು ತಿಳಿಸಿದರು.’

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್ ಅವರು ಮಾತನಾಡಿ, ಕ್ಷಯರೋಗವನ್ನು ನಿಯಂತ್ರಿಸುವಲ್ಲಿ ಹಾಗೆಯೇ ಮತ್ತೊಬ್ಬರಿಗೆ ಕ್ಷಯ ರೋಗ ಹರಡದಂತೆ ಮುನ್ನೆಚ್ಚರ ವಹಿಸುವಲ್ಲಿ ಮಾಹಿತಿ, ಶಿಕ್ಷಣ ನೀಡಲಾಗುತ್ತಿದೆ ಎಂದರು. 

ರಸಪ್ರಶ್ನೆ ಹಾಗೂ ರಂಗೋಲಿ ಸ್ಪರ್ಧೆ ಮೂಲಕ ಕ್ಷಯರೋಗ ನಿಯಂತ್ರಣ ಸಂಬಂಧ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗಿದೆ ಎಂದು ಡಾ.ರಾಮಚಂದ್ರ ಕಾಮತ್ ಅವರು ವಿವರಿಸಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆಗೆ ನೂತನ ವಿಧಾನವನ್ನು ಅಳವಡಿಸಿಕೊಂಡು ಕ್ಷಯರೋಗ ನಿಯಂತ್ರಣಕ್ಕೆ ಶ್ರಮಿಸಲಾಗುತ್ತಿದೆ ಎಂದರು. 

ಕ್ಷಯರೋಗ ನಿರ್ಮೂಲನೆ ಮಾಡುವಲ್ಲಿ ಅನೇಕ ನೂತನ ರೂಪುರೇಷೆಗಳನ್ನು ಹಾಕಿಕೊಂಡು ಸಮರೋಪಾದಿಯಲ್ಲಿ ಕಾರ್ಯಗತ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ನುಡಿದರು.  

ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ರವೀಂದ್ರ ರೈ ಅವರು ಮಾತನಾಡಿ, ರೆಡ್‍ಕ್ರಾಸ್ ಸಂಸ್ಥೆಯು ಆರೋಗ್ಯ ಸೇರಿದಂತೆ ವಿವಿಧ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.

ಯುದ್ಧ, ಕೋವಿಡ್ ಮತ್ತಿತರ ಸಂದರ್ಭದಲ್ಲಿ ನಾಗರಿಕರಿಗೆ ಸಾಧ್ಯವಾದಷ್ಟು ಸಹಕಾರ ನೀಡುತ್ತ ರೆಡ್‍ಕ್ರಾಸ್ ಸಂಸ್ಥೆ ಮುಂದೆ ಬಂದಿದೆ ಎಂದು ಅವರು ವಿವರಿಸಿದರು.  

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಲೋಕೇಶ್ ಅವರು ಮಾತನಾಡಿ, ಕ್ಷಯರೋಗ ಮುಕ್ತಗೊಳಿಸುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಹೆಚ್ಚಿನದ್ದಾಗಿದೆ. ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವಲ್ಲಿ ತಂಡವಾಗಿ ಕೆಲಸ ಮಾಡಬೇಕಿದೆ ಎಂದು ಸಲಹೆ ಮಾಡಿದರು. 

ಕ್ಷಯರೋಗವು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಮುನ್ನೆಚ್ಚರ ವಹಿಸಬೇಕು ಎಂದರು.  

ರಂಗೋಲಿ ಹಾಗೂ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಹಾಗೆಯೇ 2025ನೇ ಸಾಲಿನ ಕ್ಷಯಮುಕ್ತ ಗ್ರಾಮ ಪಂಚಾಯಿತಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬಲ್ಲಮಾವಟಿ ಮತ್ತು ಕಾಕೋಟುಪರಂಬು ಗ್ರಾ.ಪಂ.ಗಳಿಗೆ ಚಿನ್ನದ ಪದಕ, ಮೂರು ಗ್ರಾ.ಪಂ.ಗಳಿಗೆ ಬೆಳ್ಳಿ ಪದಕ ಹಾಗೂ 24 ಗ್ರಾ.ಪಂ.ಗಳಿಗೆ ಕಂಚಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಅರುಣ್ ಕುಮಾರ್, ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿವಿಧ ವಿಭಾಗದ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪಿಡಿಒಗಳು, ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ಇತರರು ಇದ್ದರು. ಕ್ಷಯ ರೋಗ ವಿಭಾಗದ ಮೇಲ್ವಿಚಾರಕರಾದ ಎಂ.ಮಹದೇವಪ್ಪ, ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ನಿರೂಪಿಸಿ, ವಂದಿಸಿದರು.