ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಕ್ರೈಸ್ತ ಮಿಷೀನರಿಗಳ ಕೊಡುಗೆ ಅಪಾರ; ಅರುಣ್ ಮಾಚಯ್ಯ
ವಿರಾಜಪೇಟೆ: ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ಸಹಭಾಗಿತ್ವದೊಂದಿಗೆ ಕೂರ್ಗ್ ಕ್ಲಿಫ್ ರೆಸಾರ್ಟ್ನಲ್ಲಿ ನಡೆದ ಕ್ಲಿಫ್ ಆಫ್ ಗ್ರೇಸ್ ಎಂಬ ಕಾರ್ಯಕ್ರಮ ಸರಳ ಹಾಗು ಅರ್ಥಗರ್ಭಿತವಾಗಿ ನಡೆಯಿತು.
ಆರ್ಥಿಕ ಸ್ಥಿತಿಯಲ್ಲಿ ಹಿಂದುಳಿದ ರೋಗಿಗಳಿಗೆ ನಗದು ರೂಪದಲ್ಲಿ ಸಹಾಯ ಮಾಡುವುದು ಹಾಗು ಅವಶ್ಯಕತೆ ಇದ್ದವರಿಗೆ ವೈದ್ಯಕೀಯ ಸಲಕರಣೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಕ್ಷಿಣ ಕೊಡಗಿಗೆ ಸೇರಿದ 15 ಚರ್ಚ್ನ ತಲಾ ಒಬ್ಬೊಬ್ಬ ಫಲಾನುಭವಿಗಳಿಗೆ ಮೂರು ಲಕ್ಷ ರೂಪಾಯಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ ಅವರು, ಧರ್ಮ ಯಾವುದೇ ಆಗಿರಲಿ, ದಾನ ಧರ್ಮ ಮಾಡುವ ಮೂಲಕ ಇತರರಿಗೆ ನೆರವಾಗಬೇಕು. ವೈದ್ಯಕೀಯ ಹಾಗು ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಮಿಷಿನರಿಗಳ ಸೇವೆ ಅಪಾರ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೊಡಗು ಡಿಸಿಸಿ ಹಾಗೂ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ಟಿ.ಎಂ ಧರ್ಮಜ ಉತ್ತಪ್ಪ ಮಾತನಾಡಿ ಇದು ಇತರರಿಗೆ ಮಾದರಿಯಾಗುವಂತಹ ಕಾರ್ಯಕ್ರಮ ಎಂದು ತಿಳಿಸಿದರಲ್ಲದೆ ತಮ್ಮ ಹೋರಾಟ ಜೀವನವನ್ನು ಹಾಗೂ ಕೈಗೊಂಡ ಯಶಸ್ಸನ್ನು ಸ್ಮರಿಸಿದರು.
ಸೇಂಟ್ ಆನ್ಸ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಅಮ್ಮತಿ ಧರ್ಮ ಕೇಂದ್ರದ ಧರ್ಮ ಗುರುಗಳಾದಂತಹ ಮದಲೈ ಮುತ್ತು ಮಾತನಾಡಿ ಈ ತರಹದ ಅನೇಕ ಒಳ್ಳೆಯ ಕಾರ್ಯಕ್ರಮಗಳನ್ನು ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ಸಂಘಟನೆ ನಡೆಸುತ್ತಿದ್ದು ಸಂಘಟನೆ ಮುಂದೆ ಮತ್ತಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ತೀರ ಕಷ್ಟದಲ್ಲಿರುವವರಿಗೆ ನೆರವಾಗಲಿ ಎಂದು ನುಡಿದರು.
ಕಾರ್ಯಕ್ರಮದ ರೂವಾರಿಗಳು ಹಾಗೂ ದಾನಿಗಳು ಆದಂತಹ ಕೂರ್ಗ್ ಕ್ಲಿಪ್ ರೆಸಾರ್ಟ್ನ ಮಾಲೀಕರಾದ ಟಿ ಜಾನ್ ಥಾಮಸ್ ಮಾತನಾಡಿ ದೇವರು ಕೊಟ್ಟಿದ್ದನ್ನು ಇತರರಿಗೆ ಹಂಚುವಲ್ಲಿ ಸಂತಸವಿದೆ ಎಂದು ನುಡಿದರಲ್ಲದೆ ಮುಂದಿನ ದಿನಗಳಲ್ಲಿ ಇದನ್ನು ಕೊಡಗಿನ ಎಲ್ಲಾ ಚರ್ಚ್ಗಳಿಗೂ ವಿಸ್ತರಿಸುವುದಾಗಿ ತಿಳಿಸಿದರು.
ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಎ.ಜೆ ಬಾಬು ಮಾತನಾಡಿ ಈ ಕಾರ್ಯಕ್ರಮಕ್ಕೆ ದಾನದ ರೂಪದಲ್ಲಿ ರೋಗಿಗಳಿಗೆ ನೆರವಾದ ಕೂರ್ಗ್ ಕ್ಲಿಫ್ ರೆಸಾರ್ಟ್ನ ಮಾಲೀಕರ ಸೇವೆ ಹಾಗೂ ಈ ಕಾರ್ಯಕ್ರಮದ ರೂಪರೇಷೆಗಳನ್ನು ಸಿದ್ಧಪಡಿಸಿದ ಅಂತೋನಿ ರಾಬಿನ್ ಅವರ ಶ್ರಮ ಸಾರ್ಥಕತೆ ಪಡೆದುಕೊಂಡಿದೆ.
ಈ ಕಾರ್ಯಕ್ರಮಕ್ಕೆ ಕೊಡಗು ಕ್ರಿಶ್ಚನ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆಯುತ್ತಿರುವುದು ನಮ್ಮ ಸಂಘಕ್ಕೆ ಹೆಮ್ಮೆ ಎಂದು ತಿಳಿಸಿದರು. ವಂದನೀಯ ಡೀನ್ ಧರ್ಮ ಗುರುಗಳಾದ ಜೇಮ್ಸ್ ಡೊಮಿನಿಕ್ ಮಾತನಾಡಿ ಫಲಾನುಭವಿಗಳ ಮುಖದಲ್ಲಿ ಮಂದಹಾಸ ಮೂಡಿಸಿದ ಈ ಕಾರ್ಯಕ್ರಮದ ಆಯೋಜಕರು ಹಾಗೂ ದಾನಿಗಳಿಗೆ ಒಳಿತಾಗಬೇಕು. ತಪಸ್ಸು ಕಾಲದಲ್ಲಿ ಈ ತರಹದ ಕಾರ್ಯಕ್ರಮಗಳು ಇನ್ನು ಹೆಚ್ಚು ಮೂಡಿ ಎಲ್ಲಾ ಕ್ರೈಸ್ತರಿಗೂ ಮಾದರಿಯಾಗಬೇಕು ಎಂದರು.
ಸಿದ್ದಾಪುರ ಸೇಂಟ್ ಮೇರಿಸ್ ದೇವಾಲಯದ ಧರ್ಮ ಗುರುಗಳಾದ ಜೋಸೆಫ್ ವಲಿಯಪರಂಬಿಲ್ ಅವರು, ಆರ್ಥಿಕವಾಗಿ ಅತ್ಯಂತ ದುರ್ಬಲರಾಗಿರುವ ಜನರಿಗೆ ಅಗತ್ಯವಿರುವ ನಿವೇಶನ ಅಥವಾ ಮನೆಗಳನ್ನು ಕಲ್ಪಿಸಿಕೊಡಲು ಸರ್ಕಾರದ ನೆರವಿನೊಂದಿಗೆ ಯೋಜನೆ ರೂಪಿಸಿ ಎಂದು ಕೇಳಿಕೊಂಡರು.
ಕಾರ್ಯಕ್ರಮದಲ್ಲಿ ಇತರ ಧರ್ಮ ಕೇಂದ್ರಗಳಿಂದ ಧರ್ಮ ಗುರುಗಳು, ಕನ್ಯಾ ಸ್ತ್ರೀಯರು, ಫಲಾನುಭವಿಗಳು ಹಾಗೂ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ಪದಾಧಿಕಾರಿಗಳು, ವಿಲ್ಸನ್, ರೀಟಾ ಆಂಟೋನಿ, ಬಿಂದುಸಾರ ಹಾಜರಿದ್ದರು.