ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಂತಕನನ್ನು ಪೊಲೀಸ್ ಠಾಣೆಗೆ ‘ಡೈರಕ್ಟ್’ ಡ್ರಾಪ್ ಮಾಡಿದ ಚಾಲಕ!

Dec 4, 2025 - 22:23
 0  1.5k
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಂತಕನನ್ನು ಪೊಲೀಸ್ ಠಾಣೆಗೆ ‘ಡೈರಕ್ಟ್’ ಡ್ರಾಪ್ ಮಾಡಿದ ಚಾಲಕ!
Photo credit: TV09

ತುಮಕೂರು, ಡಿ.04: ತುಮಕೂರು ಜಿಲ್ಲೆಯ ಗಬ್ಬಿ ತಾಲೂಕಿನ ಹಿಂಡೆಸೆಕೆರೆ ಗ್ರಾಮದ ತೋಟದ ಮನೆಯಲ್ಲಿ ನಡೆದಿದ್ದ ಮಂಜುಳಾ ಹತ್ಯೆ ಪ್ರಕರಣದಲ್ಲಿ ಮಹಿಳೆಯನ್ನು ಕತ್ತು ಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಪುಣೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧನ ಕಾರ್ಯಾಚರಣೆಯೇ ರೋಚಕ. ಪೊಲೀಸರ ಸೂಚನೆ ಮೇರೆಗೆ ಖಾಸಗಿ ಬಸ್ ಚಾಲಕನೇ ನೇರವಾಗಿ ಆರೋಪಿಯನ್ನು ಪುಣೆಯ ವಿದ್ಯಾಪೀಠ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾನೆ!

ಡಿಸೆಂಬರ್‌ 1ರಂದು ಮಂಜುಳಾಳನ್ನು ಹತ್ಯೆ ಮಾಡಲಾಗಿತ್ತು. ನೆರೆಹೊರೆಯ ಮಧು ಎಂಬಾತನ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರಿಂದಲೇ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಮಧು ಕೊಲೆಯಾದ ದಿನವೇ ಮಂಜುಳಾ ಜೊತೆ ಗಲಾಟೆ ನಡೆದಿದ್ದು, ಆಕ್ರೋಶದಿಂದಲೇ ಅವರನ್ನು ಹತ್ಯೆ ಮಾಡಿದ ಮಾಹಿತಿ ಲಭ್ಯವಾಗಿದೆ.

ಹತ್ಯೆ ಮಾಡಿದ ರಾತ್ರಿ ಮಧು ತನ್ನ ಮನೆಯಲ್ಲಿ ಉಳಿದುಕೊಂಡಿದ್ದ. ಮರುದಿನ ಬೆಳಿಗ್ಗೆ ಪೊಷಕರನ್ನು ಕರೆದುಕೊಂಡು ಕುಣಿಗಲ್‌ ನ ಆಲಪ್ಪಗುಡ್ಡಕ್ಕೆ ಹೋಗಿ ಮನೆ ದೇವರಿಗೆ 'ಮುಡಿ' ಕೊಟ್ಟಿದ್ದಾನೆ. ಬಳಿಕ ಅವರನ್ನು ಮನೆಗೆ ಬಿಟ್ಟು ನೇರವಾಗಿ ಬೆಂಗಳೂರಿಗೆ ಬಂದು ತನ್ನ ಕಾರನ್ನು ಮಾರಾಟ ಮಾಡಿ ಕಲಾಸಿಪಾಳ್ಯದಲ್ಲಿ ಪುಣೆಗೆ ಹೊರಟ ಖಾಸಗಿ ಬಸ್ ಹತ್ತಿದ್ದಾನೆ.

ಮಧು ಪರಾರಿಯಾಗಿರುವ ಮಾಹಿತಿ ಸಿಕ್ಕಿದ್ದ ಶಿರಾ ಡಿವೈಎಸ್ಪಿ ನೇತೃತ್ವದ ತಂಡ ಖಾಸಗಿ ಟ್ರಾವೆಲ್ಸ್ ಸಂಪರ್ಕಿಸಿ ಬಸ್ ಚಾಲಕನೊಂದಿಗೆ ಸಂಪರ್ಕ ಸಾಧಿಸಿದೆ. ಚಾಲಕನಿಗೆ ಆರೋಪಿ ಬಸ್‌ನಲ್ಲಿ ಇದ್ದಾನೆ ಎಂದು ತಿಳಿಸಿದ ಪೊಲೀಸರು, ಬಸ್ ನಿಲ್ಲಿಸದೆ ನೇರವಾಗಿ ಪುಣೆಯ ವಿದ್ಯಾಪೀಠ ಪೊಲೀಸ್ ಠಾಣೆಗೆ ಹೋಗುವಂತೆ ಸೂಚಿಸಿದ್ದಾರೆ. ಚಾಲಕ ಕೂಡ ಅದೇ ರೀತಿಯಲ್ಲಿ ನಡೆದುಕೊಂಡು, ಪ್ರಯಾಣಿಕರಿದ್ದ ಬಸ್ ಅನ್ನು ನೇರವಾಗಿ ಠಾಣೆಗೆ ಚಾಲಾಯಿಸಿಕೊಂಡು ಹೋಗಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.

ಪ್ರಾಥಮಿಕ ತನಿಖೆಯಲ್ಲಿ ಮಧು ಹಾಗೂ ಮಂಜುಳಾಳ ನಡುವೆ ಅನೈತಿಕ ಸಂಬಂಧ ಇದ್ದು, ಹಣಕಾಸಿನ ವಿಷಯದಲ್ಲಿ ಉದ್ಭವಿಸಿದ ಜಗಳವೇ ಕೊಲೆಗೆ ಕಾರಣ ಎನ್ನುವ ಸುಳಿವು ಸಿಕ್ಕಿದೆ. ಆದರೆ ಹತ್ಯೆಯ ಹಿಂದಿನ ನಿಖರ ಕಾರಣವನ್ನು ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.

ಪುಣೆಯಲ್ಲಿ ಬಂಧಿತನಾದ ಮಧುವನ್ನು ನ್ಯಾಯಾಲಯದ ಪ್ರಕ್ರಿಯೆ ಪೂರ್ಣಗೊಂಡ ನಂತರ ತುಮಕೂರಿಗೆ ಕರೆತರಲಾಗುತ್ತಿದೆ. ಇಡೀ ಘಟನೆಯ ರೋಚಕ ತಿರುವು ಬಸ್ ಚಾಲಕನ ತಕ್ಷಣದ ಬುದ್ಧಿವಂತಿಕೆ ಮತ್ತು ಪೊಲೀಸರ ವೇಗದ ಕಾರ್ಯಾಚರಣೆಗೆ ಶ್ಲಾಘನೆಗಳು ಹರಿದುಬಂದಿವೆ.

What's Your Reaction?

Like Like 0
Dislike Dislike 1
Love Love 2
Funny Funny 1
Angry Angry 1
Sad Sad 0
Wow Wow 1