ಕುಶಾಲನಗರದಲ್ಲಿ ಜನ ಗಣತಿದಾರರಿಗೆ ತರಬೇತಿ; ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ತಹಶೀಲ್ದಾರ್ ಕಿರಣ್ ಗೌರಯ್ಯ ಮನವಿ

ಕುಶಾಲನಗರದಲ್ಲಿ ಜನ ಗಣತಿದಾರರಿಗೆ ತರಬೇತಿ; ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ತಹಶೀಲ್ದಾರ್ ಕಿರಣ್ ಗೌರಯ್ಯ ಮನವಿ

ಕುಶಾಲನಗರ, ಏ.4: ಜನಗಣತಿ ಕಾರ್ಯವು ರಾಷ್ಟ್ರೀಯ ಕಾರ್ಯಕ್ರಮ ವಾಗಿದ್ದು, ಕಾನೂನು‌ ಬದ್ಧ ಕೆಲಸವಾಗಿದೆ. ಶಿಕ್ಷಕರು ಉತ್ತಮ ಕರ್ತವ್ಯದೊಂದಿಗೆ ಜನಗಣತಿ ಕಾರ್ಯವನ್ನು ಯಶಸ್ವಿಯಾಗಿಸಿ ಎಂದು ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಶನಿವಾರ ಮನವಿ ಮಾಡಿದರು.

 ಕುಶಾಲನಗರ ಪಟ್ಟಣದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಕಂದಾಯ ಇಲಾಖೆಯ ವತಿಯಿಂದ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮೇಲ್ವಿಚಾರಕರು ಹಾಗೂ ಗಣತಿದಾರರಿಗೆ ಮೂರು ದಿನಗಳ ಕಾಲ ಮನೆಪಟ್ಟಿ ಹಾಗೂ ಜನಗಣತಿ ಕಾರ್ಯದ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಗಣತಿ ಕಾರ್ಯವನ್ನು ಶಿಕ್ಷಕರು ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತೀರಿ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಕುಶಾಲನಗರ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 164 ಬ್ಲಾಕ್ ಗಳನ್ನು ಗುರುತಿಸಿದ್ದು, 30 ಮಂದಿ ಮೇಲ್ವಿಚಾರಕರು ಹಾಗೂ 174 ಗಣತಿದಾರರು ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು. ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ನೇಮಕಗೊಂಡಿರುವ ಗಣತಿದಾರರು ಮೊದಲ ಹಂತದ ಮನೆ ಪಟ್ಟಿ ಕಾರ್ಯದಲ್ಲಿ ನಿಗದಿ ಪಡಿಸುವ ಪ್ರದೇಶಗಳ ನಕ್ಷೆಯನ್ನು ಸಮರ್ಪಕವಾಗಿ ತಯಾರಿಸಿಕೊಂಡರೆ ಜನಗಣತಿ ಕಾರ್ಯ ಸುಲಭವಾಗುತ್ತದೆ ಎಂದು ತಹಶೀಲ್ದಾರ್ ಕಿರಣ್ ಗೌರಯ್ಯ ಹೇಳಿದರು.

ರಾಷ್ಟ್ರೀಯ ಜನಗಣತಿಯ ಮೊದಲ ಭಾಗವಾಗಿ ಮನೆ ಮನೆಗಳ ಪಟ್ಟಿ ಸರ್ವೇ ಕಾರ್ಯ ಏಪ್ರಿಲ್‌ 16ರಿಂದ ಪ್ರಾರಂಭಗೊಂಡು ಮೇ 15 ಕ್ಕೆ ಮುಕ್ತಾಯಗೊಳ್ಳಲಿದೆ. ‌ಪ್ರತಿಯೊಬ್ಬ ಗಣತಿದಾರರು ನಿಗದಿಪಡಿಸುವ ಪ್ರದೇಶಗಳ ಮನೆಗಳನ್ನು ಗುರುತಿಸುವ ನಕ್ಷೆ ಕಾರ್ಯವನ್ನು ಕಡ್ಡಾಯವಾಗಿ ಪೂರ್ಣಗೊಳಿಸುವ ಮೂಲಕ ಮಹತ್ವದ ಯೋಜನೆಯ ಯಶಸ್ಸಿ‌ಗೆ ಶ್ರಮಿಸಿ’ ಎಂದು ಸಲಹೆ ನೀಡಿದರು.

ಇಂದಿನ ಡಿಜಿಟಲ್ ಯುಗದಲ್ಲಿ ಜನಗಣತಿ ಕಾರ್ಯವನ್ನು ಸುಲಭಗೊಳಿಸಲು ಆನ್‌ಲೈನ್ ಅಪ್ಲಿಕೇಶನ್ ವ್ಯವಸ್ಥೆ ಮಾಡಲಾಗಿದೆ. 1872 ರಲ್ಲಿ ಆರಂಭವಾದ ಜನಗಣತಿ ಈಗ ಅದು 16 ನೇ ಜನಗಣತಿಯಾಗಿದ್ದು, ಸ್ವಾತಂತ್ರ್ಯ ನಂತರದ 8 ನೇ ರಾಷ್ಟ್ರೀಯ ಜನಗಣತಿ ಯಾಗಿ ಬಹಳ ಪ್ರಾಮುಖ್ಯತೆ ಪಡೆದಿದೆ‌. ದೇಶದ ಆರ್ಥಿಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಿಖರವಾದ ಅಂಕಿ- ಅಂಶಗಳ ಆಧಾರದ ಮೇಲೆ ಸರ್ಕಾರ ಯೋಜನೆಗಳನ್ನು ರೂಪಿಸಲು ಮೂಲ ಆಧಾರವಾಗಲಿದೆ ಎಂದು ತಹಶೀಲ್ದಾರ್ ಕಿರಣ್ ಗೌರಯ್ಯ ಹೇಳಿದರು.

 ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ಸಮಯದಲ್ಲಿ ಕೇಳುವ 33 ಪ್ರಶ್ನೆಗಳಿಗೆ ಸರಿಯಾದ ಉತ್ತರ ಪಡೆಯಬೇಕು. ಉತ್ತರ ನೀಡಲು ಕೆಲವು ಮಂದಿ ನಿರಾಕರಿಸಿದರೆ ಅವರೊಂದಿಗೆ ಸಂಯಮದಿಂದ ಮಾತನಾಡಿ ಗಣತಿಯ ಮಹತ್ವವನ್ನು ಅವರಿಗೆ ಅರ್ಥ ಮಾಡಿಸಿ ಮಾಹಿತಿ ಪಡೆಯುವಂತೆ ತಹಶೀಲ್ದಾರ್ ಕಿರಣ್ ಗೌರಯ್ಯ ಸಲಹೆ ನೀಡಿದರು.

ಗಣತಿ ಕಾರ್ಯದಲ್ಲಿ ಗಣತಿದಾರರಿಗೆ ಏನೇ ಸಮಸ್ಯೆ ಎದುರಾದರೆ ತಕ್ಷಣವೇ ಮೇಲ್ವಿಚಾರಕರು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿದರೆ ಸಮಸ್ಯೆಗಳಿಗೆ ತಕ್ಷಣದಲ್ಲಿ ಸೂಕ್ತ ಪರಿಹಾರ ನೀಡಲಾಗುತ್ತದೆ’ ಎಂದು ತಿಳಿಸಿದರು.

ತರಬೇತಿ ಕಾರ್ಯಾಗಾರದಲ್ಲಿ ಉಪ ತಹಶೀಲ್ದಾರ್ ಎಂ.ಪಿ.ಪ್ರೀತು , ಕಂದಾಯ ನಿರೀಕ್ಷಕ ಎಚ್.ಎಸ್.ಸಂತೋಷ್, ಕಂದಾಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು/ಸಿಬ್ಬಂದಿ ಇದ್ದರು. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಪಿ.ಪರಮೇಶ್, ಎಸ್.ಎನ್. ಲೋಕೇಶ್, ಕೆ.ಶಾಂತಕುಮಾರ್, ಪಿ.ಎಸ್.ರವಿಕೃಷ್ಣ , ಮನೆ ಸಮೀಕ್ಷೆ ಹಾಗೂ ಜನಗಣತಿ ಸಮೀಕ್ಷಾ ಕಾರ್ಯ ನಡೆಸುವ ಕುರಿತು ಪಿ.ಪಿ.ಟಿ.ಮೂಲಕ ಪೂರಕ ಮಾಹಿತಿ ನೀಡಿದರು.

ತರಬೇತಿ ಕಾರ್ಯಕ್ರಮದಲ್ಲಿ ಜನಗಣತಿ ಕಾರ್ಯದ ವಿಧಾನಗಳು, ಅಪ್ಲಿಕೇಶನ್ ಬಳಕೆ, ಮಾಹಿತಿ ಸಂಗ್ರಹಣೆಯ ನಿಯಮಗಳು ಹಾಗೂ ಜನರೊಂದಿಗೆ ಸಂವಹನ ಮಾಡುವ ವಿಧಾನಗಳ ಕುರಿತು ವಿವರವಾಗಿ ತಿಳಿಸಲಾಯಿತು.

 ತರಬೇತಿಯಲ್ಲಿ ಜನಗಣತಿಗೆ ಪೂರಕವಾಗಿ ಮೊದಲ ಹಂತದ ಮನೆಪಟ್ಟಿ ಕಾರ್ಯಾಚರಣೆ ಮಾಡುವ ಬಗ್ಗೆ ವಿವರ ಮಾಹಿತಿ ನೀಡಲಾಯಿತು.ಹಾಗಾಗಿ ಮೂರು ದಿನಗಳ ಕಾಲ ತರಬೇತಿ ಪಡೆದು ಜನಗಣತಿ ಕಾರ್ಯವನ್ನು ಯಶಸ್ವಿಯಾಗಿಸಿ ಎಂದು ತಹಶೀಲ್ದಾರ್ ಕಿರಣ್ ಗೌರಯ್ಯ ಮನವಿ ಮಾಡಿದರು.