ವಿರಾಜಪೇಟೆ:ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ರೋಟರಿ ಸಂಸ್ಥೆ ಆಶ್ರಯದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನ ಆಚರಣೆ

Feb 20, 2026 - 23:03
 0  146
ವಿರಾಜಪೇಟೆ:ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ರೋಟರಿ ಸಂಸ್ಥೆ ಆಶ್ರಯದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನ ಆಚರಣೆ

ವಿರಾಜಪೇಟೆ:ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯ. ಸಾಮಾಜಿಕ ನ್ಯಾಯವು ರಾಷ್ಟ್ರಗಳ ಒಳಗೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗೆ ಆಧಾರವಾಗಿರುವ ತತ್ವಾಗಿದೆ ಎಂದು ವಿರಾಜಪೇಟೆ ಜೆಎಂಎಫ್‌ಸಿಯ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ವಿರಾಜಪೇಟೆ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ್ ಆರ್ ಅಭಿಪ್ರಾಯಪಟ್ಟರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ರೋಟರಿ ಸಂಸ್ಥೆ ವಿರಾಜಪೇಟೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಿಟ್ಟಂಗಾಲದ ರೋಟರಿ ಪ್ರಾಢಶಾಲೆಯಲ್ಲಿ ನಡೆದ ವಿಶ್ವ ಸಾಮಾಜಿಕ ನ್ಯಾಯ ದಿನ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಾದ್ಯಂತ ಲಿಂಗ, ವಯಸ್ಸು, ಜನಾಂಗೀಯ, ಧರ್ಮ, ಸಂಸ್ಕೃತಿ, ಬಡತನ, ನಿರುದ್ಯೋಗ, ಶಿಕ್ಷಣ, ವಲಸೆ, ಆರ್ಥಿಕ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕಲು, ಸಾಮಾಜಿಕ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅದನ್ನು ಸಂಪೂರ್ಣವಾಗಿ ಕಿತ್ತುಹಾಕಲು ಪ್ರತಿ ವರ್ಷ ಫೆಬ್ರವರಿ 20 ರಂದು ವಿಶ್ವ ಸಾಮಾಜಿಕ ನ್ಯಾಯ ದಿನ ಆಚರಿಸಲಾಗುತ್ತದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2007ರ ಫೆಬ್ರವರಿ 20ರಂದು ಈ ದಿನವನ್ನು ಅಂಗೀಕರಿಸಲಾಯಿತು. 2009ರಲ್ಲಿ ಈ ದಿನವನ್ನು ಆಚರಿಸಲು ಅನುಮೋದನೆ ನೀಡಲಾಯಿತು. ಪ್ರತಿ ಸಮಾಜದಲ್ಲು ಐಕ್ಯತೆ, ಸಾಮರಸ್ಯ, ಸೌಹಾರ್ದತೆ, ಮೂಲಭೂತ ಹಕ್ಕುಗಳ ನ್ಯಾಯವಿದ್ದರೆ ಸಮಾಜದ ಅಭಿವೃದ್ಧಿಯಾಗುತ್ತದೆ. ಇದರಿಂದ ದೇಶ ಅಭಿವೃದ್ದಿಯಾಗುತ್ತದೆ. ದೇಶ ಅಭಿವೃದ್ಧಿಯಾದರೆ ವಿಶ್ವವೇ ಅಭಿವೃದ್ಧಿಯಾಗುತ್ತದೆ ಎಂದರು.

ಜೆಎಂಎಫ್‌ಸಿ ವಿರಾಜಪೇಟೆಯ ಪ್ರಧಾನ ಸಿವಿಲ್ ನ್ಯಾಯಾಧೀಶರು, ವಿರಾಜಪೇಟೆ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರದೀಪ್ ಪೋತದಾರ್ ಮಾತನಾಡಿ, ಜನತೆಯ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅತ್ಯವಶ್ಯ. ವಿದ್ಯಾರ್ಥಿಗಳು ಉತ್ತಮ ಗುರಿಯನ್ನಿಟ್ಟುಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕಬೇಕು. ದೇಶದ ಏಳಿಗೆಗಾಗಿ ಶ್ರಮಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ಗುರಿಯನ್ನಿಟ್ಟುಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಸಮಾಜದೊಂದಿಗೆ ವಿದ್ಯಾರ್ಥಿಗಳು ಬದ್ಧತೆಯನ್ನು ಹೊಂದಿರಬೇಕು ಎಂದರು.

 ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಸಿ.ಕೆ. ಪೂವಣ್ಣ ಮಾತನಾಡಿ, ಸದುದ್ದೇಶದಿಂದ ಕೂಡಿದವರ ಜೊತೆ ಸೇರಿದರೆ ನಾವು ಕೂಡ ಸಜ್ಜನರಾಗುತ್ತೇವೆ. ಪ್ರತಿಯೊಬ್ಬರೂ ಒಳಿತಿನಕಡೆಗೆ ಹೆಜ್ಜೆ ಹಾಕಬೇಕು. ಸಮಾಜದ ಸ್ವಾಸ್ಥ್ಯ ಹಾಳುಗೆಡವಬಾರದು. ಪೋಷಕರು ಇದರ ಕಡೆ ಗಮನ ಹರಿಸಬೇಕು. ಪ್ರತಿಯೊಬ್ಬರಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಸಮಾನತೆಯೆಡೆಗೆ ನಮ್ಮ ಲಕ್ಷ್ಯವಿರಬೇಕು

ದೇಶ ಕಟ್ಟುವ ಕೆಲಸ ಮಾಡಬೇಕು. ನಮ್ಮ ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಹೋಗುವುದರೊಂದಿಗೆ ದೇಶದ ಮಹನಾಯಕರುಗಳ ಉದ್ದೇಶಗಳನ್ನು ಈಡೇರಿಸಲು ಕಟಿಬದ್ದರಾಗಬೇಕು. ಅದನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವಂತಾಗಬೇಕು ಎಂದರು. 

ವಿರಾಜಪೇಟೆ ರೋಟರಿ ಸಂಸ್ಥೆ ಅಧ್ಯಕ್ಷ ಬಿ.ಬಿ ಮಾದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಮನೆಯಲ್ಲಿಯೇ ಸಮಾನತೆ, ಸಾಮಾಜಿಕತೆ ಬಗ್ಗೆ ಪಾಠವಾಗಬೇಕು. ಶಿಕ್ಷಣ ಕೇವಲ ಜೀವನೋಪಾಯಕ್ಕಿರುವ ವೇದಿಕೆಯಲ್ಲ. ಅದು ಶಿಕ್ಷಣದ ಗುರಿಗಳಲ್ಲಿಒಂದು ಮಾತ್ರ. ಮನಸ್ಸಿನಲ್ಲಿ ತುಂಬಿಕೊಂಡ ಅಜ್ಞಾನದ ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕಿನಲಿ ್ಲಮುನ್ನಡೆಸುವ ಮಾರ್ಗ ಶಿಕ್ಷಣವಾಗಿದೆ. ದೇಶದ ಸ್ವಂತ ಸಂವಿಧಾನ ಮತ್ತು ಪರಮಾಧಿಕಾರ ಹೊಂದಿದ್ದೇವೆ. ನಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಿರುವವರಾಗುವುದರ ಜತೆಗೆ ಕರ್ತವ್ಯಗಳ ಕುರಿತು ಸದಾ ಎಚ್ಚೆತ್ತುಕೊಂಡವರಾಗಬೇಕು.

 ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ನಡೆಸಿದರೆ ಹಕ್ಕುಗಳು ಸಂರಕ್ಷಣೆಯಾಗುತ್ತವೆ. ಪಠ್ಯ ಪುಸ್ತಕಕ್ಕೆ ಸೀಮಿತವಾಗಿರುವ ಕಲಿಕೆ ಸಮಾಜಕ್ಕೆ, ವ್ಯಕ್ತಿಗೆ ಪ್ರಯೋಜನಕ್ಕೆ ಬಾರದು. ಕಲಿತ ವಿಚಾರಗಳು ಬದುಕಿನಲ್ಲಿ ಬಳಕೆಯಾದಾಗ ಮಾತ್ರ ಜೀವನ ಯಶಸ್ವಿಯಾಗಲು ಸಾಧ್ಯ ಎಂದರು.

ರೋಟರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಹಸೀನಾ, ವಿರಾಜಪೇಟೆ ರೋಟರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ವಿಶಾಲಾಕ್ಷಿ, ಹಿರಿಯ ವಕೀಲರಾದ ಖಲೀಲ್ ಅಹಮ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ ರೋಟರಿ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ರೇಷ್ಮಾ, ಪ್ರೌಢ ಶಾಲೆಯ ಶಿಕ್ಷಕರಾದ ರಂಜಿತ್, ಚಂದ್ರಶೇಕರ್, ಧನ್ಯ ಸೇರಿದಂತೆ ಎಲ್ಲ ಶಿಕ್ಷಕ ವೃಂದದವರು, ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0