ಬಿಹಾರದಲ್ಲಿ ಮತ ಎಣಿಕೆ: ಎನ್‌ಡಿಎಗೆ ಭರ್ಜರಿ ಮುನ್ನಡೆ

ಬಿಹಾರದಲ್ಲಿ ಮತ ಎಣಿಕೆ: ಎನ್‌ಡಿಎಗೆ ಭರ್ಜರಿ ಮುನ್ನಡೆ
Photo credit: Times of India

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು, ಆರಂಭಿಕ ಟ್ರೆಂಡ್‌ಗಳಲ್ಲಿ ಎನ್‌ಡಿಎ ಸ್ಪಷ್ಟ ಮುನ್ನಡೆ ಸಾಧಿಸಿದೆ.

ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಎನ್‌ಡಿಎ 161 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮಹಾಘಟಬಂಧನ್ 77 ಸ್ಥಾನಗಳಲ್ಲಿ ಮುಂದಿದ್ದು, ಬಿಜೆಪಿ 70ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿರುವುದು ಗಮನಾರ್ಹ. ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ರಾಘೋಪುರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇದೇ ವೇಳೆ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯ ಪ್ರವೇಶಿಸಿರುವ ಗಾಯಕಿ ಮೈಥಿಲಿ ಠಾಕೂರ್ ಅಲಿನಗರದಲ್ಲಿ ಮುನ್ನಡೆಯಲ್ಲಿದ್ದಾರೆ. ದೀರ್ಘಾವಧಿ ಮುಖ್ಯಮಂತ್ರಿಯಾಗಿರುವ ಜೆಡಿ(ಯು) ಮುಖಂಡ ನಿತೀಶ್ ಕುಮಾರ್ ಐದನೇ ಅವಧಿಗೂ ಅಧಿಕಾರ ವಹಿಸಿಕೊಳ್ಳುತ್ತಾರೆಯೋ ಅಥವಾ ಬಿಹಾರದಲ್ಲಿ ಸರ್ಕಾರ ಬದಲಾವಣೆ ನೋಡಬೇಕಾಗುವುದೋ ಎಂಬ ಕುತೂಹಲಕ್ಕೆ 243 ಕ್ಷೇತ್ರಗಳ ಅಂತಿಮ ಫಲಿತಾಂಶಗಳು ತೆರೆ ಎಳೆಯಲಿದೆ. ನವೆಂಬರ್ 6 ಮತ್ತು 11ರಂದು ನಡೆದ ಎರಡು ಹಂತಗಳ ಮತದಾನದಲ್ಲಿ ರಾಜ್ಯವು ದಾಖಲೆಯ 67.13% ಮತದಾನ ದಾಖಲಿಸಿದೆ.

 ಎನ್‌ಡಿಎ ಪರ ಎಕ್ಸಿಟ್‌ಪೋಲ್‌ಗಳು ಭರ್ಜರಿ ಗೆಲುವಿನ ಸುಳಿವು ನೀಡಿದ್ದರೂ, ತೇಜಸ್ವಿ ಯಾದವ್ ಅವನ್ನು ತಳ್ಳಿಹಾಕಿ, “ಮಹಾಘಟಬಂಧನ್ ಪ್ರಬಲ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ” ಎಂದು ವಿಶ್ವಾಸವ್ಯಕ್ತಪಡಿಸಿದ್ದರು. ಇದೇ ವೇಳೆ ಎರಡೂ ಮೈತ್ರಿಗಳ ಪ್ರಮುಖ ಮುಖಗಳಾದ ಉಪಮುಖ್ಯಮಂತ್ರಿಗಳು ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ, ಜೆಜೆಡಿ ನಾಯಕ ತೇಜ್ ಪ್ರತಾಪ್, ಬಿಹಾರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕುಮಾರ್ ಸೇರಿದಂತೆ ಹಲವು ನಾಯಕರು ಸ್ಪರ್ಧಿಸುತ್ತಿರುವ ಕ್ಷೇತ್ರಗಳ ಫಲಿತಾಂಶ ಹೆಚ್ಚು ಕುತೂಹಲ ಮೂಡಿದೆ. ಎಣಿಕೆಯ ಅಂತಿಮ ಹಂತಗಳು ಬಿಹಾರದ ಮುಂದಿನ ರಾಜಕೀಯ ದಿಕ್ಕನ್ನು ನಿರ್ಧರಿಸಲಿವೆ.