ಮಕ್ಕಳ ಕೈಗೆ ಮೊಬೈಲ್ ನೀಡಿ, ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

Jan 5, 2026 - 01:12
 0  1.7k
ಮಕ್ಕಳ ಕೈಗೆ ಮೊಬೈಲ್ ನೀಡಿ, ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ
ಮೊಬೈಲ್

ತೆಲಂಗಾಣ, ಜ. 4: ಮುದ್ದಾದ ಇಬ್ಬರು ಮಕ್ಕಳನ್ನು ಬಿಟ್ಟು ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ. ವಸಂತಾ (29) ಮೃತ ಮಹಿಳೆ. ಆಕೆಗೆ ಏಳು ವರ್ಷ ಹಾಗೂ ಮೂರೂವರೆ ವರ್ಷದ ಇಬ್ಬರು ಗಂಡು ಮಕ್ಕಳು ಇದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ವಸಂತಾ ನಾಲ್ಕು ವರ್ಷಗಳ ಹಿಂದೆ ಪತಿ ಲಕ್ಷ್ಮಣ್ ಅವರನ್ನು ಕಳೆದುಕೊಂಡಿದ್ದರು. ಆ ಬಳಿಕ ತಾಯಿ ಹಾಗೂ ಸಹೋದರನೊಂದಿಗೆ ವಾಸಿಸುತ್ತಿದ್ದ ಅವರು, ದಿನಗೂಲಿ ಕಾರ್ಮಿಕಳಾಗಿ ಕೆಲಸ ಮಾಡಿ ಕುಟುಂಬವನ್ನು ಪೋಷಿಸುತ್ತಿದ್ದರು.

ಶುಕ್ರವಾರ ಸಂಜೆ ಮಕ್ಕಳನ್ನು ಟ್ಯಾಂಕ್ ಬಂಡ್ ಪ್ರದೇಶಕ್ಕೆ ಕರೆತಂದ ವಸಂತಾ, ಆಟವಾಡಲು ಮೊಬೈಲ್ ಫೋನ್ ನೀಡಿದ ಬಳಿಕ ಹುಸೇನ್ ಸಾಗರ್ ಸರೋವರಕ್ಕೆ ಹಾರಿದ್ದಾರೆ. ಸ್ಥಳದಲ್ಲಿದ್ದವರು ಘಟನೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಮಹಿಳೆಯ ಮೃತದೇಹವನ್ನು ನೀರಿನಿಂದ ಹೊರತೆಗೆದರು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಲಾಯಿತು. ಮಕ್ಕಳ ಬಳಿ ಇದ್ದ ಮೊಬೈಲ್ ಫೋನ್ ಆಧರಿಸಿ ಮಹಿಳೆಯ ಗುರುತು ಪತ್ತೆ ಹಚ್ಚಿ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 5
Wow Wow 0