ಯುವನಿಧಿ ಯೋಜನೆ ಕೊಡಗು ಜಿಲ್ಲೆಯಲ್ಲಿ 2116 ಮಂದಿ ಹೆಸರು ನೋಂದಣಿ

ಯುವನಿಧಿ ಯೋಜನೆ  ಕೊಡಗು ಜಿಲ್ಲೆಯಲ್ಲಿ 2116 ಮಂದಿ ಹೆಸರು ನೋಂದಣಿ

ಮಡಿಕೇರಿ ಫೆ.03:-ಸರ್ಕಾರದ ಪ್ರಮುಖ ಗ್ಯಾರಂಟಿಯಲ್ಲಿ ಒಂದಾದ ಯುವನಿಧಿ ಯೋಜನೆಯು ಜಾರಿಗೊಂಡು ಡಿಸೆಂಬರ್ ತಿಂಗಳಿಗೆ ಎರಡು ವರ್ಷ ಪೂರ್ಣಗೊಂಡಿದೆ. 

      ಆ ದಿಸೆಯಲ್ಲಿ 2026 ಜನವರಿ ಅಂತ್ಯಕ್ಕೆ ಒಟ್ಟು 2,116 ಮಂದಿ ಹೆಸರು ನೋಂದಾಯಿಸಿದ್ದು, ಇವರಲ್ಲಿ 2,079 ಪದವಿ ಮತ್ತು 37 ಮಂದಿ ಡಿಪ್ಲೋಮಾ ಪದವೀದರರು ಒಳಗೊಂಡಿದ್ದಾರೆ. ಹಾಗೆಯೇ ಇವರಲ್ಲಿ 877 ಯುವಕರು ಹಾಗೂ 1239 ಮಂದಿ ಯುವತಿಯರು ಹೆಸರು ನೋಂದಾಯಿಸಿದ್ದಾರೆ.  

       ಹೆಸರು ನೋಂದಾಯಿತ 2,116 ಯುವ ಜನರಲ್ಲಿ 1649 ಮಂದಿಗೆ ಡಿಬಿಟಿ ಮೂಲಕ ಪ್ರತೀ ತಿಂಗಳು ಹಣ ಪಾವತಿಯಾಗುತ್ತಿದೆ. ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ 575 ಮಂದಿ ಹೆಸರು ನೋಂದಾಯಿಸಿದ್ದಾರೆ. ಕುಶಾಲನಗರ 339, ಪೊನ್ನಂಪೇಟೆ 237, ವಿರಾಜಪೇಟೆ 356 ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ 609 ಮಂದಿ ಹೆಸರು ನೋಂದಾಯಿಸಿದ್ದಾರೆ. 

       ಇವರಲ್ಲಿ ಮಡಿಕೇರಿ ತಾಲ್ಲೂಕಿನ 443 ಮಂದಿ, ಕುಶಾಲನಗರ 272, ಪೊನ್ನಂಪೇಟೆ 172, ಸೋಮವಾರಪೇಟೆ 480 ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 282 ಮಂದಿಗೆ ಒಟ್ಟು 1649 ಮಂದಿಗೆ ಯುವನಿಧಿ ಯೋಜನೆ ಸೌಲಭ್ಯ ದೊರೆಯುತ್ತಿದೆ. 

       ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜಾರಿಗೊಳಿಸಲಾಗಿರುವ ಯುವನಿಧಿ ಯೋಜನೆಯು ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ.  

       ಪ್ರತಿ ತಿಂಗಳು ನಿರುದ್ಯೋಗಿ ಪದವೀದರರಿಗೆ ರೂ.3 ಸಾವಿರ ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ.1,500 ನ್ನು 2 ವರ್ಷಗಳವರೆಗೆ ನೀಡಲಾಗುತ್ತದೆ. 

       2023 ರಲ್ಲಿ ಪದವಿ, ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು, ಪದವಿ ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳವರೆಗೆ ಸರ್ಕಾರಿ, ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವವರು, ರಾಜ್ಯದಲ್ಲಿ ವಾಸವಿರುವ ಕನಿಷ್ಠ 6 ವರ್ಷದವರೆಗೆ ಪದವಿ, ಡಿಪ್ಲೋಮಾ ಉತ್ತೀರ್ಣರಾದವರಿಗೆ ಯುವನಿಧಿ ಸೌಲಭ್ಯ ಪಡೆಯಲು ಅರ್ಹರಿದ್ದಾರೆ.

       ಯಾವುದೇ ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ ಸರ್ಕಾರಿ, ಖಾಸಗಿ, ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಳ್ಳಲು ಸೇವಾ ಸಿಂಧು ಪೋರ್ಟಲ್ http://sevasindhugs.karnataka.gov.in ಗೆ ಭೇಟಿ ನೀಡಿ ಹಾಗೂ ಉಚಿತವಾಗಿ ಕರ್ನಾಟಕ ಒನ್, ಗ್ರಾಮ ಒನ್ ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರ ಅರ್ಜಿ ಸಲ್ಲಿಸಬಹುದು. 

       ‘ಸೇವಾ ಸಿಂಧು ಪೋರ್ಟಲ್ ಮುಖಪುಟದಲ್ಲಿರುವ ನ್ಯಾಡ್ ಲಿಂಕ್’ ಉಪಯೋಗಿಸಿಕೊಂಡು ತಮ್ಮ ದಾಖಲೆಗಳು ಅಪ್‍ಲೋಡ್ ಆಗುವುದನ್ನು ಖಚಿತಪಡಿಸಿಕೊಳ್ಳಬಹುದು. ಮಾಹಿತಿಗೆ ಸಹಾಯವಾಣಿ ಸಂಖ್ಯೆ 18005999918 ಗೆ ಕರೆ ಮಾಡಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಬಿ.ಮಂಜುನಾಥ್ ಅವರು ತಿಳಿಸಿದ್ದಾರೆ.

      ಮತ್ತಷ್ಟು ಮಾಹಿತಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಯಡಿ ನೋಂದವಣೆಯಾಗಿರುವ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೋಮಾ ಹೊಂದಿರುವವರಿಗೆ ಆರ್ಥಿಕ ನೆರವು ನೀಡುವ ರೂಪದಲ್ಲಿ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತಿದೆ. ಅದರಂತೆ ಪದವೀಧರರಿಗೆ ಮಾಸಿಕ ರೂ.3 ಸಾವಿರ ಮತ್ತು ಡಿಪ್ಲೋಮಾದವರಿಗೆ ಮಾಸಿಕ ರೂ.1500 ನೀಡಲಾಗುತ್ತಿದೆ.

     ಯುವನಿಧಿ ಪ್ಲಸ್-ಕೌಶಲ್ಯ ತರಬೇತಿ ಕಾರ್ಯಕ್ರಮ: ಯುವನಿಧಿ ಫಲಾನುಭವಿಗಳು ಉಚಿತ ಕೌಶಲ್ಯ ತರಬೇತಿಯನ್ನು ಪಡೆಯಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವೆಬ್‍ಸೈಟ್ https://skillmission.Karnataka.gov.in ಅನ್ನು ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳುವುದು.

     ಈ ಕೆಳಕಂಡ ತರಬೇತಿ ಸಂಸ್ಥೆಗಳ ಮುಖಾಂತರ CMKKY ಯೋಜನೆಯಡಿಯಲ್ಲಿ ಉಚಿತ ತರಬೇತಿಯನ್ನು ನೀಡಲಾಗುವುದು.

      ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು. ಸಿಡಾಕ್. ಎಂ.ಎಸ್.ಪೊಸ್ಟರಿಟಿ ಕನ್ಸಲ್ಟಿಂಗ್ ಪ್ರೈ.ಲಿ. ಶ್ರೀನಿಕೇತನ, ಹಳೆ ಖಾಸಗಿ ಬಸ್ ನಿಲ್ದಾಣದ ಹತ್ತಿರ, ಮಡಿಕೇರಿ Job Role: 1. IT Technica Support Associate. IT Helpdesk Attendant. ಈ ತರಬೇತಿಯಿಂದ ಯುವನಿಧಿ ಯೋಜನೆಯ ಅಭ್ಯರ್ಥಿಗಳಿಗೆ ಕೌಶಲ್ಯದ ಬಗ್ಗೆ ಅರಿವು ಮೂಡಿಸಿ ಅವರ ಕೌಶಲ್ಯ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವುದರಿಂದ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.