ಸೈಬರ್ ಪೊಲೀಸರ ಹೆಸರಿನಲ್ಲಿ ಬ್ಲ್ಯಾಕ್ ಮೇಲ್: 7 ಲಕ್ಷ ರೂ. ಸುಲಿಗೆ ಮಾಡಿದ ಐವರು ಆರೋಪಿಗಳು ಅರೆಸ್ಟ್

ಸೈಬರ್ ಪೊಲೀಸರ ಹೆಸರಿನಲ್ಲಿ ಬ್ಲ್ಯಾಕ್ ಮೇಲ್:  7 ಲಕ್ಷ ರೂ. ಸುಲಿಗೆ ಮಾಡಿದ ಐವರು ಆರೋಪಿಗಳು ಅರೆಸ್ಟ್

ಕುಶಾಲನಗರ:ಸೈಬರ್ ಪೊಲೀಸರೆಂದು ಹೇಳಿಕೊಂಡು ಕುಶಾಲನಗರ ಮಾರ್ಪಟ್ಟಣ ನಿವಾಸಿಯಾದ ಪರಶಿವಮೂರ್ತಿ ಎಂಬ ವ್ಯಕ್ತಿಗೆ ಬ್ಲ್ಯಾಕ್ ಮೇಲ್ ಮಾಡಿ ಅಂದಾಜು ಏಳು ಲಕ್ಷ ವಸೂಲಿ ಮಾಡಿರುವ ನಕಲಿ ಪೊಲೀಸರ ತಂಡವೊಂದರ ಐವರು ಆರೋಪಿಗಳನ್ನು ಬಂಧಿಸಿ ಹೆಡೆಮುರಿ ಕಟ್ಟುವಲ್ಲಿ ಕುಶಾಲನಗರ ಟೌನ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಡಿಕೇರಿ ತಾಲ್ಲೂಕು ಹಾಲೇರಿ ಗ್ರಾಮದ ಇಬ್ರಾಹಿಂ ಬಾದುಷಾ (25), ಮೇಲುಕೋಟೆ ಬಳಿಘಟ್ಟ ಗ್ರಾಮದ ರಾಘವೇಂದ್ರ ಬಿ.ಎಂ. (19), ಬೆಂಗಳೂರು ಬನಶಂಕರಿಯ ಸಂಗೀತ ಗಂಡ :ಇಬ್ರಾಹಿಂ ಬಾದುಷಾ (30), ಕುಶಾಲನಗರ ಆದರ್ಶ ದ್ರಾವಿಡ ಕಾಲೋನಿಯ ಚರಣ್ ಸಿ.ಕೆ. (19) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರಾಗಿದ್ದಾರೆ.

ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ನಿವಾಸಿಯಾದ ಪರಶಿವಮೂರ್ತಿ ಎಂಬುವವರು 2024ನೇ ಅಕ್ಟೊಬರ್ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಯಾರೋ ಒಬ್ಬರಿಗೆ ಮೆಸೇಜ್ /ಕಮೆಂಟ್ ಮಾಡಿದ್ದಾರೆ. ಇದಾದ ನಂತರ ಅಪರಿಚಿತ ವ್ಯಕ್ತಿ ದಿನಾಂಕ 02-11-2024 ರಂದು ಪರಶಿವಮೂರ್ತಿರವರ ಮೊಬೈಲ್ ಗೆ ಕರೆ ಮಾಡಿ ತಾನು ಪಿರಿಯಾಪಟ್ಟಣ ಸೈಬರ್ ಪೊಲೀಸ್ ಎಂದು ಪರಿಚಯಿಸಿಕೊಂಡು "ನೀವು ಹುಡುಗಿಯರಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ / ಕಮೆಂಟ್ ಮಾಡಿ ಟಾರ್ಚರ್ ನೀಡಿರುವ ಕುರಿತು ದೂರು ದಾಖಲಾಗಿರುತ್ತದೆ. ನೀವು ಹಣವನ್ನು ನೀಡಿದರೆ ಸರಿ ಮಾಡುತ್ತೇನೆ ಇಲ್ಲವಾದಲ್ಲಿ ಮನೆಯ ಬಳಿ ಬಂದು ನಿನ್ನನ್ನು ಕರೆದುಕೊಂಡು ಹೋಗಿ ಜೈಲಿಗೆ ಹಾಕುತ್ತೇನೆ ಹಾಗೂ ಅಕ್ಕಪಕ್ಕದವರ ಮನೆಯ ಮುಂದೆ ನಿನ್ನ ಮಾನ ಮರ್ಯಾದೆ ಹೋಗುವಂತೆ ಮಾಡುತ್ತೇನೆ" ಎಂದು ಬ್ಲ್ಯಾಕ್ ಮೇಲ್ ಮಾಡಿದ್ದ. ಹೀಗೆ ಪರಶಿವಮೂರ್ತಿರವರ ಮೊಬೈಲ್ ಗೆ ಹಲವು ಬಾರಿ ಕರೆ ಮಾಡಿ ಹೆದರಿಸಿ ಸುಮಾರು ಏಳು ಲಕ್ಷ ರೂ. ಹಣವನ್ನು ಪಡೆದಿದ್ದ. ಇದರಿಂದ ರೋಸಿಹೋದ ಪರಶಿವಮೂರ್ತಿರವರು, 

ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಿನಾಂಕ 11-01-2025 ರಂದು ದೂರು ನೀಡಿದ ಮೇರೆಗೆ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ 318(2), 319(1), 308(2)ರ ಬಿಎನ್ ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಸೋಮವಾರಪೇಟೆ ಉಪವಿಭಾಗ ಡಿಎಸ್ಪಿ ಚಂದ್ರಶೇಖರ್, ಕುಶಾಲನಗರ ವೃತ್ತ ನಿರೀಕ್ಷಕರಾದ ಬಿ.ಜಿ. ಪ್ರಕಾಶ್, ಸಬ್ ಇನ್ಸ್ ಪೆಕ್ಟರ್ ಗೀತಾ ಹಾಗೂ ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ 24-06-2025 ರಂದು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.