ಕೂಡುಮಂಗಳೂರು ಗ್ರಾ.ಪಂ ಸಾಮಾನ್ಯ ಸಭೆ: 16ನೇ ಹಣಕಾಸು ಕ್ರಿಯಾಯೋಜನೆಗೆ ಅನುಮೋದನೆ

ಕೂಡುಮಂಗಳೂರು ಗ್ರಾ.ಪಂ ಸಾಮಾನ್ಯ ಸಭೆ: 16ನೇ ಹಣಕಾಸು ಕ್ರಿಯಾಯೋಜನೆಗೆ ಅನುಮೋದನೆ

ಕುಶಾಲನಗರ: ಕೂಡುಮಂಗಳೂರು ಗ್ರಾ.ಪಂ ಸಾಮಾನ್ಯ ಸಭೆಯು ಅಧ್ಯಕ್ಷರಾದ ಬಾಸ್ಕರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. 

ಸಭೆಯಲ್ಲಿ ೨೦೨೫-೨೬ ನೇ ಸಾಲಿ‌ನ ೧೬ನೇ ಹಣಕಾಸಿನ ಕ್ರಿಯಾಯೋಜನೆಯನ್ನು ಅನುಮೋದಿಸಲಾಯಿತು. ಹಾಗೆಯೇ ವರ್ಗ ೧ ರ ಕ್ರಿಯಾಯೋಜನೆಯ ಪಟ್ಟಿ ತಯಾರಾಗುತ್ತಿರುವ ಬಗ್ಗೆ ಪಿಡಿಓ ಸಂತೋಷ್ ಸಭೆಗೆ ಮಾಹಿತಿ ನೀಡಿದರು. 

ಬಾಕಿಯಿರುವ ಎರಡು ಪಂಚಾಯಿತಿ ಮಳಿಗೆಗಳಿಗೆ ಮೂವರು ಅರ್ಜಿ ಹಾಕಿದ್ದು, ಹಾಗೆಯೇ ಗ್ರಾಮ ಲೆಕ್ಕಿಗರಿಗೆ ಪಂಚಾಯಿತಿಯಲ್ಲಿ ಕೊಠಡಿ ನೀಡಬೇಕು ಎಂದು ಸರ್ಕಾರದಿಂದ ಅದೇಶ ಬಂದಿರುವ ಬಗ್ಗೆ ಪಿಡಿಓ ಸಭೆಗೆ ಮಾಹಿತಿ ನೀಡಿದರು. ಅದಕ್ಕೆ ಪೂರಕವಾಗಿ ಪಂಚಾಯಿತಿ ಮಳಿಗೆಯನ್ನು ನೀಡುವ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದವು. ನಂತರ ಒಂದು ಮಳಿಗೆಯನ್ನು ಗ್ರಾಮ ಲೆಕ್ಕಿಗರಿಗೆ ನೀಡಲು ತೀರ್ಮಾನಿಸಲಾಯಿತು. 

ಪಂಚಾಯಿತಿಯಲ್ಲಿ ಯಾವುದೇ ವಿಷಯಗಳ‌ ಬಗ್ಗೆ ಸದಸ್ಯರಿಗೆ ಮಾಹಿತಿ ಸಿಗುತ್ತಿಲ್ಲ ಎಂದು ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಪಾರ್ವತಮ್ಮ ಹಾಗೂ ಖತೀಜ, ಮಾಹಿತಿ ತಿಳಿಸುವಂತೆ ಒತ್ತಾಯಿಸಿದರು. ಮಳೆಗಾಲದ ಹಿನ್ನಲೆ ವಿದ್ಯುತ್ ಇಲಾಖೆಗೆ ಜಂಗಲ್ ಕಟ್ ಮಾಡುವಂತೆ ಪತ್ರ ವ್ಯವಹಾರ ಮಾಡಲು ಸದಸ್ಯ ಗಿರೀಶ್ ತಿಳಿಸಿದರು. ಇದಕ್ಕೆ ಉಳಿದ ಸದಸ್ಯರು ಧ್ವನಿಗೂಡಿಸಿದರು.

 ಪಂಚಾಯಿತಿ ವಿದ್ಯುತ್ ಕಾರ್ಮಿಕನಿಂದ ಬೀದಿ ದೀಪ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಸದಸ್ಯರು ಆರೋಪಿಸಿದ ಹಿನ್ನಲೆ ವಿದ್ಯುತ್ ಕಾರ್ಮಿಕ ಯೋಗೇಶ್ ಅವರನ್ನು ಸಭೆಗೆ ಕರೆಸಿ ಸಮಸ್ಯೆ ಬಗ್ಗೆ ಸದಸ್ಯರು ಚರ್ಚಿಸಿದರು. ನಂತರ ಮಳೆಗಾಲದ ನಂತರ ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ತಿಳಿಸಲಾಯಿತು. ಈ ಸಂದರ್ಭ ಅಧ್ಯಕ್ಷರು ಮಾಜಿ ಅಧ್ಯಕ್ಷರಾದ ಇಂದಿರಾ ರಮೇಶ್ ಅವರಿಗೆ ಅಗೌರವದಿಂದ ನಡೆದುಕೊಂಡ ಬಗ್ಗೆ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲರನ್ನೂ ಗೌರವದಿಂದ ಕಾಣಬೇಕು. ಏಕವಚನ ಬಳಕೆ, ಅಗೌರವ ತೋರುವುದು ಅಧ್ಯಕ್ಷರಿಗೆ ಶೋಭೆ ತರುವಂತಹದ್ದಲ್ಲ. ಈ ಬಗ್ಗೆ ಪಿಡಿಓ ತಿಳುವಳಿಕೆ ನೀಡಬೇಕು ಎಂದು ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದರು. ಮಹಿಳೆಯವರಿಗೆ ಗೌರವ ನೀಡಬೇಕು ಎಂದು ಮಾಜಿ ಅಧ್ಯಕ್ಷರಾದ ಇಂದಿರಾ ರಮೇಶ್ ಒತ್ತಾಯಿಸಿದರು. ಈ ಸಂದರ್ಭ ಅಧ್ಯಕ್ಷರು ಹಾಗೂ ಕೆ.ಬಿ.ಶಂಶುದ್ಧೀನ್ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಉಳಿದ ಸದಸ್ಯರು ಹಾಗೂ ಪಿಡಿಓ ಇಬ್ಬರನ್ನೂ ಸಮಾಧಾನ ಪಡಿಸಿದರು. 

ಚಿಕ್ಕತ್ತೂರಿನಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ಕೆಲಸದ ಬಗ್ಗೆ ಕೆ.ಬಿ.ಶಂಶುದ್ಧೀನ್ ಅವರು ಪಿಡಿಓಗೆ ಮಾಹಿತಿ ಕೇಳಿದರು. ಈಗಾಗಲೇ ಸರ್ವೇ ಕೆಲಸ ಮುಗಿದಿದೆ ಎಂದರು. ಫಲಾನುಭವಿಗಳಿಗೆ ೩೦*೩೦ ಅಳತೆಯ ನಿವೇಶನಗಳಾಗಿ ನೀಡಲು ಸಭೆ ತೀರ್ಮಾನಿಸಿತು. ಆದಷ್ಟು ಬೇಗನೇ ಇದರ ಕೆಲಸ ಕಾರ್ಯಗಳನ್ನು ‌ಮುಗಿಸುವಂತೆ ಸದಸ್ಯರು ಒತ್ತಾಯಿಸಿದರು. 

ಪಂಚಾಯಿತಿಯಲ್ಲಿ ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ಸಮಸ್ಯೆ ಹೆಚ್ಚಾಗಿದ್ದು, ಸಾಕು ನಾಯಿಗಳನ್ನು ಬೀದಿಗೆ ಬಿಡದಂತೆ ಸಾರ್ವಜನಿಕರು ಅರಿವು ಮೂಡಿಸುವ ಕೆಲಸ ಆಗಬೇಕು. ಬಿಟ್ಟಲ್ಲಿ ದಂಡ ವಿಧಿಸುವ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ಮೂಡಿಸುವ ಕೆಲಸ‌ ಆಗಬೇಕು ಎಂದು ಸದಸ್ಯ ಕೆ.ಬಿ.ಶಂಶುದ್ಧೀನ್ ಒತ್ತಾಯಿಸಿದರು. 

ಸಭೆಯ ಪ್ರಾರಂಭದಲ್ಲಿ ಜಮಾ ಖರ್ಚಿನ ಬಗ್ಗೆ ಚರ್ಚಿಸಿ ಅನುಮೋದಿಸಲಾಯಿತು. ನಂತರ ಸಾರ್ವಜನಿಕರ ಅರ್ಜಿ ವಿಲೇವಾರಿ ನಡೆಯಿತು. ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಗಳು ಇದ್ದರು.