ವಿರಾಜಪೇಟೆ: ಜ್ಞಾನದೀಪ ಶಿಕ್ಷಕರಿಗೆ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ

ವಿರಾಜಪೇಟೆ: ಜ್ಞಾನದೀಪ ಶಿಕ್ಷಕರಿಗೆ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ

ವಿರಾಜಪೇಟೆ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ವಿರಾಜಪೇಟೆ ತಾಲೂಕಿನ ಸರಕಾರಿ ಶಾಲೆಗಳಿಗೆ ನಿಯೋಜಿಸಲಾದ ಜ್ಞಾನದೀಪ ಶಿಕ್ಷಕರಿಗೆ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ವಿರಾಜಪೇಟೆಯ ಯೋಜನಾ ಕಛೇರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಅತಿಥಿಗಳು ಉದ್ಘಾಟಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಕ್ಷೇತ್ರದಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು ಶಾಲೆಗಳಿಗೆ ಪೀಠೋಪಕರಣ ಒದಗಣೆ, ಜ್ಞಾನದೀಪ ಶಿಕ್ಷಕರ ನೇಮಕ ಮಾಡುವುದು, ಉನ್ನತ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಪಾವತಿ ಮೂಲಕ ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವಾಗಿದೆ. ಹಾಗೂ ಕ್ಷೇತ್ರದ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಕೊಡುಗೆಯ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಈ ಸಾಲಿನಲ್ಲಿ ತಾಲೂಕಿನ 8 ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ನೇಮಕಾತಿಯಾಗಿದೆ. ಗ್ರಾಮೀಣ ಮಕ್ಕಳಿಗೆ ವಿದ್ಯಾಭ್ಯಾಸ ದೊರಕುವಂತಾಗಬೇಕು ಎಂದು ತಿಳಿಸಿದರು.

 ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾದದ್ದು ತಮ್ಮ ಶಾಲೆಗೆ ನೀಡಿರುವ ಜ್ಞಾನದೀಪ ಶಿಕ್ಷಕರನ್ನು ಮಕ್ಕಳಿಗೆ ಉತ್ತಮವಾಗಿ ಶಿಕ್ಷಣ ನೀಡುವಲ್ಲಿ ಬಳಸಿಕೊಳ್ಳುವಂತೆ ಶಾಲೆಯ ಮುಖ್ಯಪಾಧ್ಯಾಯರಿಗೆ ತಿಳಿಸಿದರು.

ಸಾಹಿತಿ ರಜಿತ ಮಾತನಾಡಿ ಯೋಜನೆಯ ಮುಖಾಂತರ ಸಮಾಜಮುಖಿ ಕೆಲಸ ಹಮ್ಮಿಕೊಂಡಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶಗಳಲ್ಲಿರುವ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಾಗೂ ಆ ವಿದ್ಯಾರ್ಥಿಗಳು ಸಮಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎನ್ನುವ ದೂರದೃಷ್ಟಿಯಿಂದ ಜ್ಞಾನದೀಪ ಶಿಕ್ಷಕರುಗಳ ನೇಮಕ ಮಾಡಿರುವ ಕಾರ್ಯ ಈ ಸಮಾಜಕ್ಕೆ ಮಾದರಿ ಆದದ್ದು ಎಂದು ತಿಳಿಸಿದರು.

 ವಿರಾಜಪೇಟೆ ತಾಲೂಕಿನ 8 ಶಾಲೆಗಳನ್ನು ಜ್ಞಾನದೀಪ ಶಿಕ್ಷಕರ ನೇಮಕಾತಿಗಾಗಿ ಆಯ್ಕೆಮಾಡಲಾಗಿದ್ದು, ಹರಿಹರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಳತ್ಮಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾನೂರು ನಾಣಚಿ ಹಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಂಡಂಗಾಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಡ್ಲೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ನಡಿಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಚೀನಿವಾಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀರುಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜ್ಞಾನದೀಪ ಶಿಕ್ಷಕರುಗಳನ್ನು ನೇಮಕ ಮಾಡಲಾಗಿದ್ದು ಶಾಲಾ ಮುಖ್ಯೋಪಾದ್ಯಯರುಗಳಿಗೆ ವೇದಿಕೆಯಲ್ಲಿದ್ದ ಅತಿಥಿಗಳಾದ ಜಿಲ್ಲಾ ನಿರ್ದೇಶಕರಾದ ಲೀಲಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್, ಸಾಹಿತಿ ರಜಿತ ಅವರು ಮಂಜೂರಾತಿ ಪತ್ರ ವಿತರಿಸಿದರು.

ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪಿ.ಹರೀಶ್, ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು. ಪೋಟೋ:ಎಂಡಿಕೆ18ವಿಪಿಟಿ02ಎ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜ್ಞಾನದೀಪ ಶಿಕ್ಷಕರಿಗೆ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ವಿರಾಜಪೇಟೆಯ ಯೋಜನಾ ಕಛೇರಿಯಲ್ಲಿ ನಡೆಯಿತು.