ನಾಪೋಕ್ಲು ಬಳಿಯ ಕೊಳಕೇರಿ ಗ್ರಾಮದ ಬೊಮ್ಮಂಜಿಕೇರಿಯಲ್ಲಿ ಕಾಡಾನೆಗಳ ಹಾವಳಿ

ನಾಪೋಕ್ಲು ಬಳಿಯ ಕೊಳಕೇರಿ ಗ್ರಾಮದ ಬೊಮ್ಮಂಜಿಕೇರಿಯಲ್ಲಿ ಕಾಡಾನೆಗಳ ಹಾವಳಿ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳ ಹಿಂಡು ಗ್ರಾಮದ ಬೆಳಗಾರರ ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸಿ ಕಾಫಿ ಗಿಡಗಳನ್ನು ನಾಶಪಡಿಸಿ ಅಪಾರ ನಷ್ಟ ಉಂಟು ಮಾಡಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.ಕೊಳಕೇರಿ ಬೊಮ್ಮಂಜಕೇರಿ ಗ್ರಾಮದ ಅಚ್ಚಪಂಡ ರಾಜಪ್ಪ ಅವರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ತೋಟದಲ್ಲಿ ಬೆಳೆದ ಕಾಫಿ,ತೆಂಗು ಬಾಳೆ ಅಡಿಕೆ ಇನ್ನಿತರ ಫಸಲು ಭರಿತ ಕೃಷಿ ಗಿಡಗಳನ್ನು ತುಳಿದು ಅಪಾರ ನಷ್ಟ ಉಂಟು ಮಾಡಿದೆ. ಅದರಂತೆ ಇದೇ ಗ್ರಾಮದ ಅಚ್ಚಾಂಡಿರ, ಪುಲ್ಲೇರ, ಮಲೆಯಂಡ, ತಟ್ಟಂ ಡ, ಬಿದ್ದಾಟಂಡ, ಕುಟುಂಬಸ್ಥರ ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸಿದ್ದು ಇದರಿಂದ ತೋಟದಲ್ಲಿ ಬೆಳೆದ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿ ಅಪಾರ ನಷ್ಟ ಉಂಟು ಮಾಡಿದೆ. ಇದರಿಂದ ಗ್ರಾಮದ ಗೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದು ಗ್ರಾಮದಲ್ಲಿ ನಡೆದಾಡಲು ಜನರು ಭಯಪಡುವ ಪರಿಸ್ಥಿತಿ ಉದ್ಭವವಾಗಿದೆ. ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಒಂದು ಮರಿಯಾನೆ ಸೇರಿದಂತೆ ಏಳು ಕಾಡಾನೆಗಳು ಅಡ್ಡಾಡುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಧಾವಿಸಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಮುಂದುವರಿಸಿದ್ದಾರೆ.

 ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಅಪಾರ ಕೃಷಿ ಗಿಡಗಳು ಹಾನಿಯಾಗಿ ನಷ್ಟ ಸಂಭವಿಸಿದ್ದು ಸಂಬಂಧಪಟ್ಟ ಅರಣ್ಯ ಇಲಾಖೆ ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.