"ಕೊಡಗು ವಿಶ್ವವಿದ್ಯಾಲಯ ಮುಚ್ಚುತ್ತಾ!! ವಿಲೀನಗೊಳ್ಳುತ್ತಾ!!: ಕೊಡಗು ವಿವಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆಯೇ!!!

(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ(Coorgdaily): ಕೊಡಗು ವಿಶ್ವವಿದ್ಯಾಲಯ ಸೇರಿ ರಾಜ್ಯದ ಒಂಭತ್ತು ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನದಿಂದ ರಾಜ್ಯ ಸರ್ಕಾರ ಸದ್ಯಕ್ಕೆ ಹಿಂದೆ ಸರಿದಿದೆ.ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾವುದೇ ಆತುರದ ತೀರ್ಮಾನ ತೆಗೆದುಕೊಳ್ಳದಿರಲು ರಾಜ್ಯ ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಮೇ 09 ರಂದು ತೀರ್ಮಾನ ಕೈಗಕೊಳ್ಳಲಾಗಿದೆ.2022ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವ ಬಿಜೆಪಿ ಸರ್ಕಾರ ಕೊಡಗು ಸೇರಿ ರಾಜ್ಯದಲ್ಲಿ ನೂತನ 10 ವಿಶ್ವವಿದ್ಯಾಲಯಗಳನ್ನು ಘೋಷಿಸಲಾಗಿತ್ತು.
ಯಾವುದೇ ಹಣಕಾಸಿನ ನೆರವು ಮತ್ತು ಸ್ಥಿತಿಗತಿಯನ್ನು ನೋಡದೆ ನೂತನ ವಿಶ್ವವಿದ್ಯಾಲಯವನ್ನು 2023ರಲ್ಲಿ ಘೋಷಿಸಲಾಗಿತ್ತು.ಬಿಜೆಪಿ ಸರ್ಕಾರದ ಅವಧಿಯಲ್ಲಿ ನೂತನವಾಗಿ ಘೋಷಣೆಯಾಗಿದ್ದ ಬಹುತೇಕ ವಿವಿಗಳು ಆರ್ಥಿಕ ಸಂಕಷ್ಟದಿಂದ ಕಾರ್ಯನಿರ್ವಹಿಸುತ್ತಿತ್ತು.ಆದರೆ ವಿಶೇಷವಾಗಿ ಕೊಡಗು ವಿಶ್ವವಿದ್ಯಾಲಯಕ್ಕೆ ಆರ್ಥಿಕ ಸಮಸ್ಯೆ ಇದ್ದರೂ ಕೂಡ ಪರ್ಯಾಯ ಸಂಪನ್ಮೂಲಗಳನ್ನು ಬಳಸಿಕೊಂಡು ಯಶಸ್ವಿಯಾಗಿ ವಿಶ್ವವಿದ್ಯಾಲಯವನ್ನು ನಡೆಸಿಕೊಂಡು ಬರುತ್ತಿತ್ತು.ಆದರೆ ಏತನ್ಮಧ್ಯೆ ರಾಜ್ಯ ಸರ್ಕಾರವು ಹಣಕಾಸು ಹಾಗೂ ಭೂ ಕೊರತೆ ನೆಪವೊಡ್ಡಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಣೆಯಾದ ಬೀದರ್ ವಿಶ್ವವಿದ್ಯಾಲಯ ಹೊರತುಪಡಿಸಿ ಉಳಿದ ಒಂಭತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ಫೆಬ್ರವರಿ 13 ರಂದು ನಡೆದ ವಿವಿಗಳ ಆರ್ಥಿಕ ಸ್ಥಿತಿಗತಿಯ ಪರಿಶೀಲನೆ ಕುರಿತು ಸಭೆಯಲ್ಲಿ ಉಪಸಮಿತಿ ತೀರ್ಮಾನಕೈಗೊಂಡಿತ್ತು.ನೂತನ ವಿವಿಗಳನ್ನು ಮುಚ್ಚುವುದಕ್ಕೆ ರಾಜ್ಯದಲ್ಲಿ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು.
ವಿಶೇಷವಾಗಿ ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವುದಕ್ಕೆ ತೀವ್ರ ಸ್ವರೂಪದ ವಿರೋಧ ಹಾಗೂ ಪ್ರತಿಭಟನೆಗಳು ನಡೆದಿತ್ತು.ಕೊಡಗು ಜಿಲ್ಲಾ ಬಿಜೆಪಿಯು, ಸಂಸದರಾದ ಯದುವೀರ್ ಒಡೆಯರ್ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದ್ದರು.ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಬೇಕೆಂಬ ಕೂಗು ಬರೀ ಕುಶಾಲನಗರ ತಾಲ್ಲೂಕು ವ್ಯಾಪ್ತಿಗೆ ಮಾತ್ರ ಸೀಮಿತಗೊಂಡಿದ್ದು ಇಲ್ಲಿ ಗಮನಿಸಬೇಕಾದ ಅಂಶ.ವಿವಿ ಉಳಿಸುವ ಹೋರಾಟವನ್ನು ಜಿಲ್ಲಾ ಮಟ್ಟಕ್ಕೆ ಕೊಂಡೊಯ್ಯಲು ವಿವಿ ರಕ್ಷಣಾ ಹೋರಾಟ ಸಮಿತಿಗೆ ಸಾಧ್ಯವಾಗಿಲ್ಲ.ಇಂದಿಗೂ ಕೂಡ ಕೊಡಗು ಜಿಲ್ಲೆಯಲ್ಲಿ ಕೊಡಗು ವಿವಿ ಮುಚ್ಚಿ, ಹಳೆಯ ಮಾದರಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯದಕ್ಕೆ ಸೇರ್ಪಡೆ ಮಾಡಬೇಕೆಂಬ ಕೂಗು ಕೂಡ ಇದೆ.
ಸರ್ಕಾರದ ಮೇಲೆ ಅಡ್ಡಪರಿಣಾಮ ವ್ಯತಿರಿಕ್ತ ಅಭಿಪ್ರಾಯ!
ಹಣಕಾಸಿನ ಕಾರಣಕ್ಕಾಗಿ ವಿವಿಗಳನ್ನು ಮುಚ್ಚುವ ತೀರ್ಮಾನ ಸರಿ ಎನಿಸಿದರೂ ಕೂಡ ಸಾರ್ವಜನಿಕರ ತೀವ್ರ ವಿರೋಧ ಹಾಗೂ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ವ್ಯಕ್ತವಾಗಿತ್ತು.ಸಭೆಯಲ್ಲಿ ವಿವಿ ಮುಚ್ಚುವ ಒಮ್ಮತ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.ವಿವಿಗಳ ಆರ್ಥಿಕ ಸ್ಥಿತಿಗತಿ ಪರಿಶೀಲನೆಯ ಮೊದಲ ಸಭೆ ಫೆಬ್ರವರಿ 13 ಕ್ಕೆ ನಡೆದಿತ್ತು.ಇದಾದ ಮೂರು ತಿಂಗಳ ಬಳಿಕ ವಿವಿಗಳ ಆರ್ಥಿಕ ಸ್ಥಿತಿಗತಿಗಳ ಪರಿಶೀಲನೆಯ ಎರಡನೇ ಸಭೆ ಮೇ 09 ರಂದು ನಡೆದಿದೆ.ಎರಡನೇ ಸಭೆಯಲ್ಲಿ, ವಿವಿಗಳನ್ನು ಮುಚ್ಚುವ ಯಾವುದೇ ತೀರ್ಮಾನ ಸದ್ಯಕ್ಕೆ ತೆಗೆದುಕೊಳ್ಳುವುದು ಬೇಡ,
ಒಂದು ವೇಳೆ ವಿವಿಗಳನ್ನು ಮುಚ್ಚಿ ಪಕ್ಕದ ವಿವಿಗಳಿಗೆ ವಿಲೀನಗೊಳಿಸಿದರೆ ಸರ್ಕಾರದ ಮೇಲೆ ದೊಡ್ಡ ಪರಿಣಾಮ ಬೀರಳಿದೆ.ಇದರ ಬಗ್ಗೆ ಇನ್ನೂ ಚರ್ಚೆಗಳು ನಡೆಯಬೇಕೆಂದು ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.ಅದಲ್ಲದೇ ನೂತನ ವಿವಿಗಳನ್ನು ಮುಚ್ಚುವುದಕ್ಕೆ ಕಾಂಗ್ರೆಸ್ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಅಭಿಪ್ರಾಯ ಕೂಡ ಸಭೆಯಲ್ಲಿ ವ್ಯಕ್ತವಾಗಿದೆ.
ಸರ್ಕಾರ ಮಟ್ಟದಲ್ಲಿ ಒತ್ತಡ ಹಾಕಿದ್ದ ಮಂತರ್ ಗೌಡ!
ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರಕ್ಕೆ ಕೊಡಗು ಜಿಲ್ಲೆಯಲ್ಲಿ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು.ಈ ಹಿನ್ನೆಲೆ ವಿವಿ ರಕ್ಷಣಾ ಹೋರಾಟ ಸಮಿತಿ ಕೂಡ ಅಸ್ತಿತ್ವಕ್ಕೆ ಬಂದಿತ್ತು.ವಿವಿ ಹೋರಾಟ ಸಮಿತಿ ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಅವರ ನೇತೃತ್ವದಲ್ಲಿ ಸಿಎಂ,ಡಿಸಿಎಂ ಹಾಗೂ ಸಚಿವರನ್ನು ಭೇಟಿ ಮಾಡಿ ಕೊಡಗು ವಿವಿ ಉಳಿಸುವಂತೆ ಮನವಿ ಮಾಡಿದ್ದರು.ಕೊಡಗು ವಿವಿ ಉಳಿಸುವ ಸಂಬಂಧ ಡಾ ಮಂತರ್ ಗೌಡ ಅವರು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ನಿರಂತರವಾಗಿ ಒತ್ತಡ ಹಾಕಿದ್ದರು.ಆದರೆ ಕೊಡಗು ವಿವಿ ಉಳಿಸುವ ಸಂಬಂಧ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಇದುವರೆಗೆ ಕೂಡ ತಮ್ಮ ಅಭಿಪ್ರಾಯ ಬಹಿರಂಗಪಡಿಸಿಲ್ಲ.
ರಾಜ್ಯದಲ್ಲಿ ಬಿಜೆಪಿ ಅವಧಿಯಲ್ಲಿ ಘೋಷಣೆಯಾಗಿದ್ದ ವಿವಿಗಳನ್ನು ಮುಚ್ಚಲು ಸರ್ಕಾರದ ತೀರ್ಮಾನ ಕೈಗೊಂಡ ದಿನಗಳಿಂದ ಬಿಜೆಪಿ ದೊಡ್ಡ ಮಟ್ಟದ ವಿರೋಧ ವ್ಯಕ್ತಪಡಿಸಿದ್ದರು.ರಾಜಕೀಯ ದುರದ್ದೇಶದಿಂದ ವಿವಿ ಮುಚ್ಚಲಾಗುತ್ತಿದೆ ಎಂದು ಆರೋಪ ಮಾಡಿದ್ದರು.ಬಜೆಟ್ ಅಧಿವೇಶನದಲ್ಲಿ ಕೂಡ ವಿವಿ ಮುಚ್ಚುವ ನಿರ್ಧಾರದ ಬಗ್ಗೆ ಚರ್ಚೆಗಳು ನಡೆದಿತ್ತು.ಇದೀಗ ಸದ್ಯಕ್ಕೆ ಕೊಡಗು ಸೇರಿ ರಾಜ್ಯದ ಒಂಭತ್ತು ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರದಿಂದ ಸದ್ಯಕ್ಕೆ ಸರ್ಕಾರ ಹಿಂದೆ ಸರಿದಿದೆ.ಕೊಡಗು ಜಿಲ್ಲೆಯಲ್ಲಿ ಕೊಡಗು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯನ್ನು ಮುಂದಿನ ತಿಂಗಳು ಎದುರಿಸಲಿದ್ದಾರೆ.ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಪ್ರಕ್ರಿಯೆ ಕೂಡ ಆರಂಭಗೊಂಡಿದೆ.
ಮುನ್ನೋಟವಿಲ್ಲದೆ,ಬಿಜೆಪಿ ಸರ್ಕಾರ ಅವಧಿಯಲ್ಲಿ ವಿವಿಗಳನ್ನು ಸ್ಥಾಪಿಸಿದರ ಬಗ್ಗೆ ಚರ್ಚೆ ನಡೆದಿದೆ.ಕೆಲ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.ಇನ್ನೊಂದು ಸಭೆ ಬಳಿಕ ನಿರ್ಣಯಿಸಲಾಗುವುದು.
ಡಾ.ಎಂ.ಸಿ ಸುಧಾಕರ್,ಉನ್ನತ ಶಿಕ್ಷಣ ಸಚಿವ
----------------------------------------
ಕೊಡಗು ವಿಶ್ವವಿದ್ಯಾಲಯದ ಅಸ್ತಿತ್ವದ ಬಗೆಗೆ ಯಾವುದೇ ಗೊಂದಲಗಳು ಬೇಡ. ಸಾರ್ವಜನಿಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಅಂತಹ ಯಾವುದೇ ಊಹಾ ಪೋಹಗಳಿಗೆ ಅವಕಾಶ ಕೊಡಬೇಡಿ. ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನಗೊಳಿಸುವಂತಹ ಯಾವುದೇ ಚಿಂತನೆಗಳು ಸರಕಾರದ ಮುಂದಿಲ್ಲ.
ಪ್ರೊ. ಅಶೋಕ ಸಂಗಪ್ಪ ಆಲೂ,ರಮಾನ್ಯ ಕುಲಪತಿಗಳು ಕೊಡಗು ವಿಶ್ವವಿದ್ಯಾಲಯ, ಕೊಡಗು