ಮನೆಯ ಸುತ್ತಮುತ್ತ ಪರಿಸರ ಶುಚಿತ್ವಕ್ಕೆ ಒತ್ತು ನೀಡಿ: ಜಿಲ್ಲಾಧಿಕಾರಿ

ಮಡಿಕೇರಿ: ಜಿಲ್ಲೆಯಲ್ಲಿ ಆಗಾಗ ಮಳೆಯಾಗುತ್ತಿರುವ ಹಿನ್ನೆಲೆ ಮನೆಯ ಸುತ್ತಮುತ್ತ ತೆಂಗಿನ ಚಿಪ್ಪು, ಟೈರು, ಹೂಕುಂದಗಳಲ್ಲಿ ನೀರು ನಿಲ್ಲದಂತೆ ಗಮನಹರಿಸಬೇಕು. ಪರಿಸರ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ‘ಜಿಲ್ಲಾ ಆರೋಗ್ಯ ಅಭಿಯಾನ’ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನೆಯ ಸುತ್ತಮುತ್ತ ಪರಿಸರ ಶುಚಿತ್ವವಾಗಿದ್ದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಸೊಳ್ಳೆಗಳು ಹರಡದಂತೆ ಗಮನಹರಿಸುವುದು ಅತ್ಯಗತ್ಯವಾಗಿದೆ. ನಿಂತ ನೀರಿನಿಂದ ಲಾರ್ವ ಕಂಡುಬಂದಲ್ಲಿ ಅದನ್ನು ನಾಶ ಪಡಿಸುವಂತಾಗಬೇಕು. ಆ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಅಗತ್ಯ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಶಿಶು ಮತ್ತು ತಾಯಂದಿರ ಆರೋಗ್ಯ ಕ್ಷೇಮ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಶಿಶು ಆರೋಗ್ಯ ಕಾಪಾಡುವುದು ಅತಿಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಜೊತೆಗೆ ಪ್ರತೀ ತಿಂಗಳು ತಾಯಂದಿರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾರ್ಚ್ ತಿಂಗಳಲ್ಲಿ 515 ಹೆರಿಗೆ ಆಗಿದ್ದು, ಪ್ರಸಕ್ತ ವರ್ಷದಲ್ಲಿ 5702 ಹೆರಿಗೆ ಆಗಿದೆ ಎಂದು ಅವರು ಮಾಹಿತಿ ನೀಡಿದರು.
ಮಾರ್ಚ್ ತಿಂಗಳಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 450, ಖಾಸಗಿ ಆಸ್ಪತ್ರೆಯಲ್ಲಿ 65 ಹೆರಿಗೆ ಆಗಿದ್ದು, ಇಲ್ಲಿಯವರೆಗೆ ಸರ್ಕಾರಿ ಆಸ್ಪತ್ರೆಯಲ್ಲಿ 4,969 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 733 ಹೆರಿಗೆ ಆಗಿದೆ ಎಂದು ಡಾ.ಸತೀಶ್ ಕುಮಾರ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಒಟ್ಟು 7 ಪುರುಷರು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಸ್ತ್ರೀಸಂತಾನಹರಣ ಶಸ್ತ್ರ ಚಿಕಿತ್ಸೆಯನ್ನು 37 ಮಂದಿ ಮಾಡಿಸಿಕೊಂಡಿದ್ದಾರೆ. ಇದುವರೆಗೆ 1339 ಸ್ತ್ರೀಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಆರ್‍ಸಿಎಚ್ ಅಧಿಕಾರಿ ಡಾ.ಮಧುಸೂದನ್ ಅವರು ಮಾರ್ಚ್ ತಿಂಗಳಲ್ಲಿ 636 ಮಗುವಿಗೆ ಪೂರ್ಣ ಲಸಿಕೆ ನೀಡಲಾಗಿದೆ. ಇದುವರೆಗೆ 6874 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಶೇ.95 ರಷ್ಟು ಸಾಧನೆ ಮಾಡಲಾಗಿದೆ ಎಂದರು.
ಮಲೇರಿಯಾ ಪ್ರಕರಣ ಸಂಬಂಧಿಸಿದಂತೆ ಡಿಸೆಂಬರ್ ಅಂತ್ಯಕ್ಕೆ 3 ಪ್ರಕರಣ ಕಂಡುಬಂದಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಶ್ರೀನಿವಾಸ್ ಅವರು ತಿಳಿಸಿದರು.
ಕಳೆದ ಮಾರ್ಚ್ ತಿಂಗಳು 4,501 ಮಂದಿಗೆ ಎಚ್‍ಐವಿ ಪರೀಕ್ಷೆ ನಡೆಸಿದ್ದು, ಇಲ್ಲಿಯವರೆಗೆ 57,945 ಪರೀಕ್ಷೆ ನಡೆಸಲಾಗಿದೆ. ಇವರಲ್ಲಿ 862 ಗರ್ಭಿಣಿಯರಿಗೆ ಹಾಗೂ ಇಲ್ಲಿಯವರೆಗೆ 10,299 ಮಂದಿ ಗರ್ಭಿಣಿಯರಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಮಾತನಾಡಿ ಡಿಐಎಂಸಿ ತಂಡವು ಇಲ್ಲಿಯವರೆಗೆ ಚಾಲ್ತಿಯಲ್ಲಿರುವ 28 ಕೇಂದ್ರಗಳನ್ನು ಪರಿಶೀಲಿಸಿದೆ ಎಂದರು.
ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರ ಕುಶಾಲನಗರ ಹೊರತುಪಡಿಸಿ ಉಳಿದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಅದರಲ್ಲಿ ಅರಿವಳಿಕೆ ತಜ್ಞರು, ಸ್ತ್ರೀರೋಗ ತಜ್ಞರು ಹಾಗೂ ಮಕ್ಕಳ ತಜ್ಞರ ಕೊರತೆ ಇರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾಹಿತಿ ನೀಡಿದರು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವೈದ್ಯಾಧಿಕಾರಿಗಳು ಇತರರು ಇದ್ದರು.
What's Your Reaction?






