ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ: ಆರು ಮಂದಿ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ

ವಿರಾಜಪೇಟೆ  ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ:  ಆರು ಮಂದಿ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ

ವಿರಾಜಪೇಟೆ: ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆರು ಮಂದಿ ಪತ್ರಕರ್ತರು ಆಯ್ಕೆಯಾಗಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಸಕರಾದ ಎ.ಎಸ್ ಪೊನ್ನಣ್ಣ ಅವರು ತಮ್ಮ ತಂದೆ ದಿವಂಗತ ಎ.ಕೆ ಸುಬ್ಬಯ್ಯ ಹಾಗೂ ತಾಯಿ ದಿವಂಗತ ಎ.ಎಸ್ ಪೊನ್ನಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗೆ ಇಬ್ಬರು ಆಯ್ಕೆಯಾಗಿದ್ದಾರೆ.  "ಕರ್ನಾಟಕ ಸೂಪರ್ ಡಿವಿಷನ್ ಗೆ ಲಗ್ಗೆಯಿಟ್ಟ ಕೊಡಗಿನ ಪ್ರಥಮ ಮಹಿಳಾ ಫುಟ್ಬಾಲ್ ಕ್ಲಬ್-ಯುನೈಟೆಡ್ ಎಫ್.ಸಿ ಕೊಡಗು" ವರದಿಗೆ ಕೆ.ಎಂ ಇಸ್ಮಾಯಿಲ್ ಕಂಡಕರೆ ಪಡೆದುಕೊಂಡಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ "ಮಾಲ್ದಾರೆ ಮಹಿಳೆಯರ ಕ್ರಿಕೆಟ್ ಕ್ರೇಜ್" ವರದಿಗೆ ಸತೀಶ್ ನಾರಾಯಣ್ ಪಡೆದುಕೊಂಡಿದ್ದಾರೆ.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷರಾದ ಬಿ.ಆರ್ ಸವಿತಾ ರೈ ಅವರು ತಮ್ಮ ತಂದೆ ದಿವಂಗತ ಬಿ.ಎಸ್ ರಂಗನಾಥ ರೈ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ "ಮೂರು ತಲೆಮಾರಿನ ದೇಶೀಯ ನಾಟಿ ಪದ್ದತಿ ಭತ್ತದ ನಾಟಿಯಲ್ಲಿ ಕುಟುಂಬ-ಗ್ರಾಮಸ್ಥರ ಸಂಭ್ರಮ" ವರದಿಗೆ ಟಿ.ಜೆ ಕಿಶೋರ್ ಕುಮಾರ್ ಶೆಟ್ಟಿ ಪಡೆದುಕೊಂಡಿದ್ದಾರೆ.

ಸಿದ್ದಾಪುರದ ಸಮಾಜ ಸೇವಕರಾದ ಕೆ.ಯು ಅಬ್ದುಲ್ ಮಜೀದ್ ಅವರು ತಮ್ಮ ತಂದೆ ದಿವಂಗತ ಉಸ್ಮಾನ್ ಹಾಜಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿಗೆ ಟಿ.ವಿ 1 ವಾಹಿನಿಯಲ್ಲಿ ಪ್ರಸಾರವಾದ "ಈ ಸಾವು ನ್ಯಾಯವೇ?" ವರದಿಗೆ ರವಿಕುಮಾರ್ ಎಂ ಪಡೆದುಕೊಂಡಿದ್ದಾರೆ.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಕೋಲತಂಡ ರಘು ಮಾಚಯ್ಯ ಅವರು ತಮ್ಮ ತಂದೆ ದಿವಂಗತ ಕೋಲತಂಡ ಉತ್ತಪ್ಪ ಹಾಗೂ ತಾಯಿ ಕಾಮವ್ವ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ ಮತ್ತು ವನ್ಯಜೀವಿ ವರದಿಗೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ "ಬರಿದಾಗುತ್ತಿವೆ ಕಾಡಿನ ಕೆರೆಗಳ ಒಡಲು" ವರದಿಗೆ ಅಂತೋಣಿ ಪಿ.ವಿ ಪಡೆದುಕೊಂಡಿದ್ದಾರೆ.

ವಿರಾಜಪೇಟೆಯ ಪ್ರಗತಿ ಶಾಲೆಯ ಮುಖ್ಯಸ್ಥರಾದ ಮಾದಂಡ ತಿಮ್ಮಯ್ಯ ಅವರು ತಮ್ಮ ತಾಯಿ ದಿವಂಗತ ತುಂಗಾ ಪೂವಯ್ಯ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಶೈಕ್ಷಣಿಕ ವರದಿಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ "ಸರಕಾರಿ ಶಾಲೆ ಆದರ್ಶ ಸಂಸ್ಥೆ" ವರದಿಗೆ ರಜಿತಾ ಕಾರ್ಯಪ್ಪ ಪಡೆದುಕೊಂಡಿದ್ದಾರೆ.

ಜೂನ್ 22 ರಂದು ನಡೆಯಲಿರುವ ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.