ವಿರಾಜಪೇಟೆ:ಜೂನ್ 08ರಂದು ದೈವಜ್ಞ ಸಮಾಜದ ನೂತನ ಕಟ್ಟಡ ಉದ್ಘಾಟನೆ

ವಿರಾಜಪೇಟೆ:ಜೂನ್ 08ರಂದು  ದೈವಜ್ಞ ಸಮಾಜದ ನೂತನ ಕಟ್ಟಡ ಉದ್ಘಾಟನೆ

ವಿರಾಜಪೇಟೆ(Coorgdaily): ದಕ್ಷಿಣ ಕೊಡಗಿನ ದೈವಜ್ಞ ಸಮಾಜದ ವತಿಯಿಂದ ನಿರ್ಮಿಸಲಾಗಿರುವ ನೂತನ ಕಟ್ಟಡ ಮತ್ತು ಸಭಾಂಗಣ ಉದ್ಘಾಟನೆ ಕಾರ್ಯಕ್ರಮವು ಜೂನ್ 08ರಂದು ನಡೆಯಲಿದೆ ಎಂದು ದೈವಜ್ಞ ಸಮಾಜದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.ದೈವಜ್ಞ ಸಮಾಜ ದ.ಕೊಡಗು ವಿರಾಜಪೇಟೆ ವತಿಯಿಂದ ನಗರ ಪ್ರವಾಸಿ ಮಂದಿರದಲ್ಲಿ ನೂತನ ಕಟ್ಟಡ ಲೋಕಾರ್ಪಣೆ ಮತ್ತು ಸಭೆ ಸಮಾರಂಭಗಳ ಮಾಹಿತಿ ನೀಡುವ ಉದ್ದೇಶಕ್ಕಾಗಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. 

ಈ ಸಂದರ್ಭ ಮಾತನಾಡಿದ ಕೊಡಗು ದೈವಜ್ಞ ಸಮಾಜದ ಆಡಳಿತ ಮಂಡಳಿಯ ಅಧ್ಯಕ್ಷರಾದ ಉಲ್ಲಾಸ್ ಸಿ. ಶೇಟ್ , ವಿರಾಜಪೇಟೆ ನಗರದ ನಿಸರ್ಗ ಬಡಾವಣೆಯಲ್ಲಿ ದೈವಜ್ಞ ಸಮಾಜದ ನೂತನ ಕಟ್ಟಡ ಮತ್ತು ಸಭಾಂಗಣವನ್ನು ನಿರ್ಮಿಸಲಾಗಿದ್ದು ದೇವಾತ ಕಾರ್ಯಗಳೊಂದಿಗೆ 08-06-2025 ರಂದು ಭಾನುವಾರದಂದು ಶ್ರೀ ಕ್ಷೇತ್ರ ಕರ್ಕಿ, ಶ್ರೀ ಜ್ಞಾನೇಶ್ವರಿ ಪೀಠ ದೈವಜ್ಞ ಬ್ರಾಹ್ಮಣ ಮಠ, ದ ಪೀಠಾಧೀಪತಿಗಳಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳ ದಿವ್ಯ ಹಸ್ತದೊಂದಿಗೆ ಲೋಕಾರ್ಪಣೆ ಆಗಲಿದೆ. 

ತಾ. 07 ರಂದು ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ವಾಸ್ತು ಹೋಮ, ಬ್ರಹ್ಮಾದಿ ಮಂಡಲ ಹೋಮ ಹಾಗೂ ನವಗ್ರಹ ಹೋಮ , ನಡೆಯಲಿದೆ. ತಾ.08 ರಂದು ಬೆಳಿಗ್ಗೆ 09 9-30 ಕ್ಕೆ ಶ್ರೀಗಳ ಪುರ ಪ್ರವೇಶ ಮತ್ತು, ಪೂರ್ಣ ಕುಂಭ ಸ್ವಾಗತದೊಂದಿಗೆ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಗಳನ್ನು ಬರಮಾಡಿಕೊಳ್ಳುವುದು. ಬಳಿಕ ಕರ್ಕ ಲಗ್ನದ ಶುಭ ಮುಹೂರ್ತ 10.40 ರ ಸಮಯದಲ್ಲಿ ಸಮಾಜದ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಅಪರಾಹ್ನ 3-00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ -6 ರಿಂದ ಕರೋಕೆ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ದೈವಜ್ಞ ಸಮಾಜದ ಕಾರ್ಯದರ್ಶಿಗಳಾದ ಬಿ.ಎಸ್.ಬಾಲಕೃಷ್ಣ ಅವರು ಮಾತನಾಡಿ, ದೈವಜ್ಞ ಸಮಾಜ ಸಂಘ 1979 ರಲ್ಲಿ ಸ್ಥಾಪನೆಗೊಂಡಿದೆ. ನಂತರದಲ್ಲಿ ಪತ್ರಿ ವರ್ಷ ಸಮುದಾಯ ಬಾಂಧವರಿಗಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ಏರ್ಪಡಿಸಿಕೊಂಡು ಬರುತ್ತಿದ್ದೇವೆ. ನಂತರದಲ್ಲಿ ಸಮಾಜದ ಅಧ್ಯಕ್ಷರು ಗಳು ಮತ್ತು ದಾನಿಗಳ ನೆರವಿನಿಂದ ನಿಸರ್ಗ ಬಡಾವಣೆಯಲ್ಲಿ 1994 ರಲ್ಲಿ 01 ಎಕ್ರೆ 15 ಸೆಂಟು ಸ್ಥಳ ಖರೀದಿಸಲಾಯಿತು, 2018 ರಲ್ಲಿ ಮಹಾಸ್ವಾಮೀಗಳ ದಿವ್ಯ ಹಸ್ತದಿಂದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಸಮುದಾಯದ ಬಾಂಧವರು ಹಾಗೂ ದಾನಿಗಳ ನೆರವಿನಿಂದ ಸುಮಾರು 85 ಲಕ್ಷ ರೂಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ. ತಾ.07 ರಂದು ದೇವಾತ ಕಾರ್ಯಗಳು ಹಾಗೂ ತಾ 08 ರಂದು ನಡೆಯುವ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ದೈವಜ್ಞ ಸಮಾಜ ದ.ಕೊಡಗು ಅಧ್ಯಕ್ಷರಾದ ಉಲ್ಲಾಸ್ ಸಿ. ಶೇಟ್ ಅವರ ಅದ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ, ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಪುರಸಭೆ ಅದ್ಯಕ್ಷರಾದ ದೇಚಮ್ಮ ಕಾಳಪ್ಪ, ಪುರಸಭೆ ಸದಸ್ಯರಾದ ಅನಿತಾ ಕುಮಾರ್, ಅಖಿಲ ಕರ್ನಾಟಕ ದೈವಜ್ಞ ಸಮಾಜದ ಅಧ್ಯಕ್ಷರಾದ ರವಿ ಎಸ್. ಗಾಂವ್ಕರ್ ಧಾರವಾಡ, ಅಖಿಲ ಕರ್ನಾಟಕ ದೈವಜ್ಞ ಮಹಿಳಾ ಸಮಾಜದ ಅಧ್ಯಕ್ಷರಾದ ವಿನಯ ಆರ್. ರಾಯ್ಕರ್ ಶಿವಮೊಗ್ಗ, ದೈವಜ್ಞ ಸೌರಭ ಪತ್ರಿಕೆ ಸಂಪಾದಕರು ಪ್ರಶಾಂತ್ ಮಂಗಳೂರು ಹಾಗೂ ಇತರ ಪ್ರಮುಖರು ಆಗಮಿಸಲಿದ್ದಾರೆ. ಎಂದು ಹೇಳಿದರು.

ದೈವಜ್ಞ ಸಮಾಜದ ಕೋಶಾಧಿಕಾರಿಗಳಾದ ರಾಜೇಶ್ ಆರ್. ಶೇಟ್ ಮಾತನಾಡಿ, ಸಮಾಜವು ಸ್ಥಾಪನೆ ಗೊಂಡು ಹಲವು ವರ್ಷಗಳು ಉರುಳಿದರು ಅನೇಕ ಮಂದಿ ಅಧ್ಯಕ್ಷರು ಮತ್ತು ಸದಸ್ಯರು ಪದಾಧಿಕಾರಿಗಳು ಹಿರಿಯರು ಕಟ್ಟಡ ನಿರ್ಮಾಣದ ಸಹಕಾರಿಗಳಾಗಿದ್ದಾರೆ. ಸಮಾಜದ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ಮಹನಿಯರಿಗೆ ಸಮಾರಂಭ ವೇಳೆಯಲ್ಲಿ ಸನ್ಮಾನಿಸಲಾಗುವುದು ಮತ್ತು ಸಭಾಂಗಣದ ಕೆಲಸಗಳು ಪೂರ್ಣವಾದ ಬಳಿಕ ಸಭೆ ಸಮಾರಂಭಗಳಿಗೆ ನೀಡಲಾಗುತ್ತದೆ ಎಂದು ಹೇಳಿದರು. ಎರಡು ದಿನಗಳು ನಡೆಯುವ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ಬಾಂಧವರು ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.

ವರದಿ: ಕಿಶೋರ್ ಕುಮಾರ್ ಶೆಟ್ಟಿ