ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ‘ಸಾಧಕರೊಂದಿಗೆ ಸಂವಾದ: ಬಾಲ್ಯ, ಶಿಕ್ಷಣ, ಕಲಾಪ್ರದರ್ಶನಕ್ಕೆ ಕುಟುಂಬದವರ ಮತ್ತು ಸರ್ಕಾರದ ಪ್ರೋತ್ಸಾಹ ಸ್ಮರಣೀಯ: ಐಮುಡಿಯಂಡ ರಾಣಿಮಾಚಯ್ಯ
ಮಡಿಕೇರಿ ಜು.23:-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಹಾಗೂ ಕೊಡಗು ಜಿಲ್ಲೆ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಐಮುಡಿಯಂಡ ರಾಣಿ ಮಾಚಯ್ಯ ಅವರೊಂದಿಗೆ ಸಾಧಕರೊಂದಿಗೆ ಸಂವಾದ ತಿಂಗಳ ಅತಿಥಿ ಕಾರ್ಯಕ್ರಮವು ನಗರದ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಗುರುವಾರ ಅರ್ಥಪೂರ್ಣವಾಗಿ ನಡೆಯಿತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕøತರು ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ರಾಣಿ ಮಾಚಯ್ಯ ಅವರು ಸಾಧಕರೊಂದಿಗೆ ಸಂವಾದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಾಲ್ಯ, ಶಿಕ್ಷಣ, ಕಲಾ ಪ್ರದರ್ಶನ, ಹಾಗೆಯೇ ಸರ್ಕಾರದ ಪ್ರೋತ್ಸಾಹ ಹೀಗೆ ತಮ್ಮ ಜೀವನ ಚರಿತ್ರೆ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ನೀಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ನಿರ್ಮಲಾ ಮಠಪತಿ ಅವರು ಸಾಧಕರೊಂದಿಗಿನ ಸಂವಾದ ತಿಂಗಳ ಅತಿಥಿ ಕಾರ್ಯಕ್ರಮ ನಡೆಸಿಕೊಟ್ಟರು.
ಐಮುಡಿಯಂಡ ರಾಣಿ ಮಾಚಯ್ಯ ಅವರು ತಂದೆಯವರು ವ್ಯಾಪಾರ ಮಾಡುತ್ತಿದ್ದರು. ಕಾಕೋಟುಪರಂಬುನ ತೋಟದಲ್ಲಿ ಜೀವನ ಮಾಡುತ್ತಿದ್ದೇವು. ಅಲ್ಲಿಯೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಡೆದು, ವಿರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ವಿಧ್ಯಾಭ್ಯಾಸ ನಡೆಯಿತು ಎಂದು ಅವರು ಸ್ಮರಿಸಿದರು. ನಂತರ ಪದವಿಗೆ ಬರುವ ಹಂತದಲ್ಲಿ ಮದುವೆ ಮಾಡಲಾಯಿತು. ಆ ಸಂದರ್ಭದಲ್ಲಿ ಕೊಡಗಿನ ಸಾಂಪ್ರದಾಯಿಕ ಉಮ್ಮತ್ತಾಟ್ ಕಲಾ ಪ್ರದರ್ಶನವನ್ನು ಮೆಲ್ಲ ಮೆಲ್ಲಗೆ ನೀಡಲಾಗುತ್ತಿದ್ದು, ಇದನ್ನು ಒಂದು ಸಾಂಸ್ಕøತಿಕ ಮತ್ತು ಸಾಂಪ್ರದಾಯಿಕವಾಗಿ ಮತ್ತಷ್ಟು ಎತ್ತರಕ್ಕೆ ಬೆಳೆಸಲು ಶ್ರಮಿಸಲಾಯಿತು ಎಂದು ರಾಣಿಮಾಚಯ್ಯ ಅವರು ವಿವರಿಸಿದರು. 70 ರ ದಶಕದಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರಬರಲು ಪೋಷಕರು ಬಿಡುತ್ತಿರಲಿಲ್ಲ. ಆದರೂ ಸಹ ಕೊಡಗಿನ ಸಾಂಪ್ರದಾಯಿಕ ಕಲಾ ಪ್ರದರ್ಶನವನ್ನು ಮತ್ತಷ್ಟು ಫಸರಿಸಲು ಶ್ರಮಿಸಲಾಯಿತು.
ಆ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರೋತ್ಸಾಹ ಅಪಾರವಾಗಿದೆ ಎಂದು ರಾಣಿ ಮಾಚಯ್ಯ ಅವರು ನುಡಿದರು. ಕಳೆದ 50 ವರ್ಷಗಳಿಂದಲೂ ಉಮ್ಮತ್ತಾಟ್ ಕಲಾ ಪ್ರದರ್ಶನವನ್ನು ದೇಶ-ವಿದೇಶಗಳಲ್ಲಿ ಪ್ರದರ್ಶಿಸುತ್ತಾ ಕೊಡಗಿನ ಸಂಸ್ಕøತಿ, ಆಚಾರ-ವಿಚಾರ ಮತ್ತು ಪರಂಪರೆಯನ್ನು ತಿಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ರಾಣಿ ಮಾಚಯ್ಯ ಅವರು ತಿಳಿಸಿದರು. ಸಾವಿರಾರು ಹೆಣ್ಣು ಮಕ್ಕಳಿಗೆ ಉಮ್ಮತ್ತಾಟ್, ಕೋಲಾಟ್ ಕಲಾ ಪ್ರದರ್ಶನ ಹೇಳಿ ಕೊಟ್ಟಿರುವುದು ಖುಷಿ ತಂದಿದೆ. ಕುಟುಂಬದವರು ಅತ್ತೆ ಮತ್ತು ಮಾವ ಕಲಾ ಪ್ರದರ್ಶನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಆ ನಿಟ್ಟಿನಲ್ಲಿ ಕುಟುಂಬದವರ ಸಹಕಾರದಿಂದ ಹಾಗೂ ಜಿಲ್ಲೆಯ ಜನತೆಯ ಪ್ರೇರಣೆಯಿಂದ ಎಲ್ಲೆಡೆ ಉಮ್ಮತ್ತಾಟ್ ಪ್ರದರ್ಶನ ನೀಡುತ್ತಾ ಬರಲಾಗಿದೆ ಎಂದರು. ಉಮ್ಮತ್ತಾಟ್ ಮತ್ತು ಕೋಲಾಟ್ ಪ್ರದರ್ಶನವನ್ನು ಈಗ ಸಹ ತರಬೇತಿ ನೀಡುತ್ತಾ ಬರಲಾಗಿದೆ.
ಆಸಕ್ತರು ಕಲಿಕೆಗೆ ಮುಂದಾಗಬೇಕು. ನಮ್ಮ ಸಂಪ್ರದಾಯ, ಕಲಾ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ‘ಇಪ್ಪತ್ತು ದಿನದಲ್ಲಿ ಉಮ್ಮತ್ತಾಟ್ ಮತ್ತು ಕೋಲಾಟ್ ಕಲಾ ಪ್ರದರ್ಶನ ತರಬೇತಿ ನೀಡಲಾಗುವುದು, ಮನೆಯಲ್ಲಿಯೇ ಕಾರುಬಾರು ನಡೆಸಿಕೊಂಡು ಹೋಗುತ್ತಿದ್ದೇನೆ. ಇದುವರೆಗೆ 10 ಸಾವಿರ ಹೆಣ್ಣು ಮಕ್ಕಳಿಗೆ ಉಮ್ಮತ್ತಾಟ್ ಕಲಾ ಪ್ರದರ್ಶನ ಹೇಳಿ ಕೊಡಲಾಗಿದೆ. ಈಗಾಗಲೇ ರಾಜ್ಯದ 14 ಜಿಲ್ಲೆಗಳಲ್ಲಿ ಉಮ್ಮತ್ತಾಟ್ ಕಲಾ ಪ್ರದರ್ಶನ ನೀಡಲಾಗಿದೆ ಎಂದು ರಾಣಿ ಮಾಚಯ್ಯ ಅವರು ವಿವರಿಸಿದರು.’ ಕೊಡಗಿನ ಉಮ್ಮತ್ತಾಟ್ ಪ್ರದರ್ಶನ ತಂಡವು ಸಾಂಸ್ಕøತಿಕ ವಿನಿಮಯ ಕಲಾ ಪ್ರದರ್ಶನ ನೀಡಿರುವುದು ವಿಶೇಷವಾಗಿದೆ.
ಉಮ್ಮತ್ತಾಟ್, ಕೋಲಾಟ್ ಜೊತೆಗೆ ಉರುಟ್ಟಿಕೋಟ್ ಕಲಾ ಪ್ರದರ್ಶನ ನೀಡಲಾಗುತ್ತಿದೆ ಎಂದರು. ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿನ ಮಂದ್ ಸ್ಥಳಗಳನ್ನು ಗುರುತಿಸಿ ಸಂರಕ್ಷಿಸಲು ಪ್ರಯತ್ನಿಸಲಾಗಿದೆ. ದುಡಿ ಕಲಿಕೆಗೆ ಒತ್ತು ನೀಡಲಾಗಿದೆ. ಕೊಡಗು ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಇಂದಿನ ಶರವೇಗದ ಬದುಕಿನಲ್ಲಿ ವಿಫುಲ ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿಚಲಿತರಾಗಬಾರದು ಎಂದು ಇದೇ ಸಂದರ್ಭದಲ್ಲಿ ರಾಣಿಮಾಚಯ್ಯ ಅವರು ಸಲಹೆ ಮಾಡಿದರು. ಪ್ರತಿಷ್ಠಿತ ಹಂಪಿ, ಕದಂಬ, ಬಾದಾಮಿ ಉತ್ಸವಗಳು, ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳು, ಜಾನಪದ ಜಾತ್ರೆ, ಚಿತ್ರದುರ್ಗ, ಗೋವಾ, ಕರಾವಳಿ, ನಾಗಪುರ ಉತ್ಸವಗಳಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ನುಡಿದರು. ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಿಜೋರಾಂ, ಮುಂಬಯಿ, ಮಧ್ಯಪ್ರದೇಶ, ಕೇರಳ, ಪಾಂಡಿಚೇರಿ ಹೀಗೆ ದೆಹಲಿ ಗಣರಾಜ್ಯೋತ್ಸವ ಪೆರೇಡ್ ಹೀಗೆ ರಾಜ್ಯ ಹೊರ ರಾಜ್ಯದಲ್ಲಿ ಕೋಲಾಟ್ ಮತ್ತು ಉಮ್ಮತ್ತಾಟ್ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆಯಲಾಗಿದೆ ಎಂದರು. ಆ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆಯುತ್ತೇನೆ ಎಂದು ನಿರೀಕ್ಷೆ ಇರಲಿಲ್ಲ. ಸಾಕ್ಷ್ಯಚಿತ್ರ ನಿರ್ಮಾಣ ಮಾಡುವಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಗತ್ಯ ಸಹಕಾರ ನೀಡಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ನಿರ್ಮಲಾ ಮಠಪತಿ ಅವರು ಈ ಸಂದರ್ಭದಲ್ಲಿ ಮಾತನಾಡಿ ರಾಜ್ಯ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈಗ ವಿಭಾಗ ಮಟ್ಟದಲ್ಲಿ ಸಾಧಕರೊಂದಿಗಿನ ಸಂವಾದ ಕಾರ್ಯಕ್ರಮ ಆಯೋಜಿಸುತ್ತಾ ಬರಲು ಅವಕಾಶ ಮಾಡಲಾಗಿದೆ. ಆ ನಿಟ್ಟಿನಲ್ಲಿ ವಿಭಾಗ ಮಟ್ಟದಲ್ಲಿ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಕನ್ನಡ ನಾಡು ಸಾಂಸ್ಕøತಿಕ ಹಾಗೂ ಐತಿಹಾಸಿಕವಾಗಿ ಶ್ರೀಮಂತಿಕೆ ಹೊಂದಿದ್ದು, ಆಯಾಯ ಪ್ರಾದೇಶಿಕ ಭಾಷೆಗಳು, ಹಬ್ಬ ಹರಿದಿನಗಳು, ಜಾನಪದ ಕಲೆಗಳು, ಸಂಸ್ಕøತಿ ಶ್ರೀಮಂತಗೊಳಿಸಿದೆ. ಆ ದಿಸೆಯಲ್ಲಿ ಕೊಡಗಿನ ಸಂಸ್ಕøತಿ ಪರಂಪರೆಯು ತನ್ನದೇ ಆದ ಕೊಡುಗೆ ನೀಡಿದೆ ಎಂದರು.
ರಾಣಿ ಮಾಚಯ್ಯ ಅವರು 50 ವರ್ಷಗಳಿಗೂ ಹೆಚ್ಚು ಕಾಲ ಕೊಡಗು ಜಿಲ್ಲೆಯ ಸಾಂಸ್ಕøತಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ದೇಶ ವಿದೇಶಗಳಲ್ಲಿ ಉಮ್ಮತ್ತಾಟ್ ಕಲಾ ಪ್ರದರ್ಶನ ಶ್ರೀಮಂತಗೊಳಿಸಿದ್ದಾರೆ ಎಂದರು. ಉಮ್ಮತ್ತಾಟ್, ಕೋಲಾಟ್ ಮತ್ತಿತರ ಸಾಂಪ್ರದಾಯಿಕ ಕಲಾ ಪ್ರಕಾರವನ್ನು ಆಸಕ್ತಿಯಿಂದ ಕಲಿಸಿ ಕೊಡಗಿನ ವಿಶಿಷ್ಟ ಮಹಿಳಾ ನೃತ್ಯ ಕಲೆಯನ್ನು ಪಸರಿಸುವಲ್ಲಿ ಶ್ರಮಿಸಿದ್ದಾರೆ. ರಾಣಿ ಮಾಚಯ್ಯ ಒಂದು ರೀತಿ ಮಹಿಳಾ ರಾಯಬಾರಿ ಎಂದರೆ ತಪ್ಪಾಗಲಾರದು ಎಂದರು. ಕನ್ನಡ ಕಂಪನ್ನು ಎಲ್ಲೆಡೆ ಪಸರಿಸುವಲ್ಲಿ ಶ್ರಮಿಸಿದ್ದಾರೆ. ಹೆಚ್ಚೇವು ಕನ್ನಡ ದೀಪ ಎಂಬ ಗೀತೆಗೆ ನೃತ್ಯದ ಯಶಸ್ವಿ ಪ್ರದರ್ಶನ ನೀಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಎರಡು ಬಾರಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಒಂದು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕಲಾ ಸೇವೆಯನ್ನು ಸ್ಮರಿಸಿ ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜ್ಯೋತಿ ರಾವ್ ಫುಲೆ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿರುವುದು ವಿಶೇಷವೇ ಸರಿ ಎಂದು ಸ್ಮರಿಸಿದರು. ಕೊಡಗಿನ ಸಾಂಸ್ಕøತಿಕ ಲೋಕದಲ್ಲಿ ಉಮ್ಮತ್ತಾಟ್ ಕಲಾ ಪ್ರದರ್ಶನವನ್ನು ರಾಷ್ಟ್ರದಾದ್ಯಂತ ನೀಡುವ ಮೂಲಕ ರಾಣಿ ಮಾಚಯ್ಯ ಅವರು ಕಲಾ ಸಾಧನೆ ಅನುಕರಣೀಯ ಎಂದು ನಿರ್ಮಲಾ ಮಠಪತಿ ಅವರು ಹೇಳಿದರು.
ಹಿರಿಯರು ಹಾಕಿಕೊಟ್ಟ ಕಲಾ ಪ್ರಕಾರವನ್ನು ಉಳಿಸಿಕೊಂಡು ಹೋಗಬೇಕು. ಸಂಸ್ಕøತಿ ಮತ್ತು ಸಂಪ್ರದಾಯವನ್ನು, ಜೊತೆಗೆ ಕಲೆಗಳು ನಶಿಸಿ ಹೋಗದಂತೆ ನೋಡಿಕೊಳ್ಳಬೇಕು. ಕಲೆ, ಸಾಹಿತ್ಯ ಅಧ್ಯಯನದಿಂದ ಎಲ್ಲರಿಗೂ ಮಾನಸಿಕ ಸ್ವಾಸ್ಥ್ಯಕ್ಕೆ ಅನುಕೂಲವಾಗಿದೆ ಎಂದರು. ಮಕ್ಕಳು ಸಾಹಿತ್ಯ ಓದಬೇಕು. ಅಮೂಲ್ಯ ಜೀವನ ಕಳೆದುಕೊಳ್ಳಬಾರದು. ಗುರು ಹಿರಿಯರನ್ನು ಗೌರವಿಸಬೇಕು. ಶಿಕ್ಷಣ ವ್ಯಕ್ತಿತ್ವ ರೂಪಿಸಿದರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬಹುದು. ಆ ನಿಟ್ಟಿನಲ್ಲಿ ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಯಲ್ಲಿ ತೊಡಿಗಿಸಿಕೊಳ್ಳಬೇಕು ಎಂದರು.
ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಮಾತನಾಡಿ ರಾಣಿ ಮಾಚಯ್ಯ ಅವರು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಎರಡು ಬಾರಿ ಸದಸ್ಯರಾಗಿ ಮತ್ತು ಒಂದು ಬಾರಿ ಅಧ್ಯಕ್ಷರಾಗಿ ಜನ ಮೆಚ್ಚುವ ರೀತಿ ಕೆಲಸ ಮಾಡಿ ಜಿಲ್ಲೆಗೆ ಹೆಸರು ತಂದಿದ್ದಾರೆ ಎಂದು ಹೇಳಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಮಾತನಾಡಿ ಸಾಧಕರೊಂದಿಗಿನ ಸಂವಾದವು ಒಂದು ಅವಿಸ್ಮರಣೀಯ ಕಾರ್ಯಕ್ರಮವಾಗಿದೆ.
ಬಹುಸಂಸ್ಕøತಿ ಒಳಗೊಂಡಿರುವ ನಾಡಿನಲ್ಲಿ ಉಮ್ಮತ್ತಾಟ್ ಮತ್ತು ಕೋಲಾಟ್ ಪ್ರದರ್ಶನವನ್ನು ಎಲ್ಲೆಡೆ ಪಸರಿಸಿದ್ದಾರೆ ಎಂದರು. ರಾಣಿ ಮಾಚಯ್ಯ ಅವರು ಕೊಡಗಿನ ಸಂಸ್ಕøತಿ, ಕಲೆಗಳನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಿದ್ದಾರೆ. ಒಂದು ರೀತಿ ನಾಡಿನ ಕಣ್ಮಣಿ ಎಂದರೆ ಅತಿಶಯೋಕ್ತಿಯಲ್ಲ ಎಂದರು. ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ವಿಜಯ, ಇತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಶಿಕ್ಷಕಿ ಜಯಲಕ್ಷ್ಮಿ ನಿರೂಪಿಸಿದರು. ಜಯಲಕ್ಷ್ಮಿ ಮತ್ತು ತಂಡದವರು ನಾಡಗೀತೆ ಹಾಡಿದರು. ರಿಜಿಸ್ಟ್ರಾರ್ ಚಿನ್ನಸ್ವಾಮಿ ವಂದಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
