ವಾಣಿಜ್ಯ ನಗರಿ ಗೋಣಿಕೊಪ್ಪಲಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಎಂದು!....

May 10, 2025 - 16:39
May 10, 2025 - 16:45
 0  21
ವಾಣಿಜ್ಯ ನಗರಿ ಗೋಣಿಕೊಪ್ಪಲಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಎಂದು!....

ಗೋಣಿಕೊಪ್ಪಲು:ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯನಗರಿ ಗೋಣಿಕೊಪ್ಪಲಿನಲ್ಲಿ ವಾಹನಗಳ ದಟ್ಟಣೆ ಮಿತಿಮೀರಿದ್ದು, ಸಾರ್ವಜನಿಕರು, ವಾಹನಗಳ ಚಾಲಕರು ಪರದಾಡುವಂತಾಗಿದೆ. ಆಸ್ಪತ್ರೆಗೆ ತೆರಳುವ ರೋಗಿಗಳು, ಸರಕಾರಿ ಕಚೇರಿಗಳಿಗೆ ತೆರಳುವವರು, ಕೆಲಸ ಕಾರ್ಯನಿಮಿತ್ತ ದೂರದೂರಿಗೆ ತೆರಳುವವರು ದಿನನಿತ್ಯದ ಟ್ರಾಫಿಕ್ ಸಮಸ್ಯೆಯಿಂದ ಹೈರಾಣಾಗುವಂತಾಗಿದೆ. ಗೋಣಿಕೊಪ್ಪದ ಪೊನ್ನಂಪೇಟೆ ಜಂಕ್ಷನ್‌ನಿಂದ ಜೋಡುಬೀಟಿವರೆಗೂ, ಗೋಣಿಕೊಪ್ಪ-ಪಾಲಿಬೆಟ್ಟ ಜಂಕ್ಷನ್‌ನಿಂದ ಚೆನ್ನಂಗೊಲ್ಲಿವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ದಿನನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆಯಿಂದಾಗಿ ಜನರು ಬಸವಳಿಯುವಂತಾಗಿದೆ. ಅಗತ್ಯ ಕೆಲಸಕಾರ್ಯಗಳಿಗೆ ಗೋಣಿಕೊಪ್ಪಲು ನಗರಕ್ಕೆ ಆಗಮಿಸುವ ವಾಹನಗಳ ಚಾಲಕರಿಗೆ ಈ ಟ್ರಾಫಿಕ್ ಸಮಸ್ಯೆ ನಿತ್ಯ ತಲೆನೋವಾಗಿ ಪರಿಣಮಿಸಿದೆ. ಹೊಸ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು. ಅಲ್ಲದೇ ಸರಿಯಾದ ವಾಹನ ನಿಲ್ದಾಣ ಇಲ್ಲದಿರುವುದು ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ವಾಹನಗಳ ದಟ್ಟಣೆಯಿಂದ ಗೋಣಿಕೊಪ್ಪಲು ಮಾರ್ಗವಾಗಿ ಸಂಚರಿಸುವುದರ ಬದಲಿಗೆ ಕುಂದಾ-ಹಾತೂರು ಮಾರ್ಗವಾಗಿ ವಿರಾಜಪೇಟೆ ಕಡೆಗೆ ಮೈಸೂರಿಗೆ ತೆರಳುವವರು ತಿತಿಮತಿ ಮಾರ್ಗವನ್ನು ಬಳಸುತ್ತಿದ್ದಾರೆ. ಅದೂ ಅಲ್ಲದೇ, ಪೊನ್ನಂಪೇಟೆ ತಿರುವಿನಲ್ಲಿ ಚೆಸ್ಕಾಂ ಇಲಾಖೆಯಿಂದ ವಿದ್ಯುತ್ ಕಂಬಗಳನ್ನು ಅಳವಡಿಸುತ್ತಿದ್ದು, ಮೊದಲೇ ಟ್ರಾಫಿಕ್ ಜಾಮ್ ಇರುವ ಈ ಸ್ಥಳದಲ್ಲಿ ಇನ್ನೂ ಹೆಚ್ಚಿನ ವಾಹನ ದಟ್ಟಣೆಯಾಗುವುದರಿಂದ ವಾಹನ ಚಾಲಕರು ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೇ ವಿದ್ಯುತ್ ಕಂಬಗಳ ಅಳವಡಿಕೆಯಿಂದಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.  

 ಟ್ರಾಫಿಕ್ ಸಮಸ್ಯೆ ಕುರಿತು ಮಾತನಾಡಿದ ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಡೆಮಾಡ ಸುನಿಲ್ ಮಾದಪ್ಪ ಅವರು, ಕಳೆದ ನಾಲ್ಕು ವರ್ಷಗಳಿಂದ ಗೋಣಿಕೊಪ್ಪದಲ್ಲಿ ಟ್ರಾಫಿಕ್ ಸಮಸ್ಯೆ ಸ್ವಲ್ಪ ಕಡಿಮೆ ಇತ್ತು ಆದರೆ ಈ ವರ್ಷ ವಾಹನಗಳ ದಟ್ಟಣೆ ಮಿತಿಮೀರಿದೆ. ಹೊಸ ವಾಹನಗಳ ಸಂಖ್ಯೆ ಹೆಚ್ಚಾಗಿರುವುದು ಅಲ್ಲದೇ, ವಾಹನಗಳ ನಿಲ್ದಾಣಕ್ಕೆ ಸೂಕ್ತ ಸ್ಥಳ ಇಲ್ಲದಿರುವುದು ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಟ್ರಾಫಿಕ್ ಸಮಸ್ಯೆಯಿಂದಾಗಿ ವ್ಯಾಪಾರ ವಹಿವಾಟು ನಡೆಸುವ ವರ್ತಕರಿಗೆ ತುಂಬಾ ನಷ್ಟವಾಗುತ್ತಿದೆ. ಅಲ್ಲದೇ ಪೊನ್ನಂಪೇಟೆ ತಿರುವಿನಲ್ಲಿ ಚೆಸ್ಕಾಂ ಇಲಾಖೆ ವಿದ್ಯುತ್ ಕಂಬಗಳನ್ನು ಅಳವಡಿಸುತ್ತಿರುವುದು ವಾಹನಗಳ ದಟ್ಟಣೆಗೆ ಕಾರಣವಾಗಿದ್ದು, ಈ ವಿದ್ಯುತ್ ಕಂಬವನ್ನು ತೆರವುಗೊಳಿಸಿ, ರಸ್ತೆ ಅಗಲೀಕರಣಗೊಳಿಸಿದ್ದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಯಬಹುದೆಂದರು.

ಜಯಲಕ್ಷ್ಮಿ ಬಸ್ ಮಾಲೀಕರಾದ ಕಾಡ್ಯಮಾಡ ಗೌತಮ್ ಅವರು ಮಾತನಾಡಿ, ಪ್ರತಿದಿನ ಟ್ರಾಫಿಕ್ ಸಮಸ್ಯೆ ಎದುರಿಸಬೇಕಾಗಿದೆ. ಗೋಣಿಕೊಪ್ಪ ಬೈಪಾಸ್ ರಸ್ತೆ ಹಾಗೂ ನೂತನ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿರುವುದು ಒಂದು ಕಾರಣವಾಗಿದೆ. ಪೊನ್ನಂಪೇಟೆ ಜಂಕ್ಷನ್ ರಸ್ತೆಯನ್ನು ಅಗಲೀಕರಣಗೊಳಿಸಿದ್ದಲ್ಲಿ ಬಹುಮಟ್ಟಿಗೆ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ. ಟ್ರಾಫಿಕ್ ಸಮಸ್ಯೆಯಿಂದಾಗಿ ವಿರಾಜಪೇಟೆ-ಮಡಿಕೇರಿ ಗೋಣಿಕೊಪ್ಪದಿಂದ ಪೊನ್ನಂಪೇಟೆಗೆ ತೆರಳುವ ಬಸ್ ಗಳು ಸಮಯಕ್ಕೆ ಸರಿಯಾಗಿ ಹೊರಡಲಾಗದೆ ಲೈನ್ ಕಟ್ಟಾಗಿ ಬಸ್ ನಿಲ್ದಾಣದಲ್ಲಿ ನಿಂತಿರುತ್ತವೆ. ಶಾಸಕರು ಈ ಬಗ್ಗೆ ಶಾಸಕರು ಪರಿಶೀಲಿಸಿ, ಟ್ರಾಫಿಕ್ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.

ವರ್ತಕರಾದ ಕೊಲ್ಲಿರ ಉಮೇಶ್ ಅವರು ಮಾತನಾಡಿ, ಗೋಣಿಕೊಪ್ಪದ ಟ್ರಾಫಿಕ್ ಸಮಸ್ಯೆ ಬಹಳ ವರ್ಷಗಳದ್ದು, ಟ್ರಾಫಿಕ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಗೋಣಿಕೊಪ್ಪ ಮಾರ್ಗದ ಬದಲಿಗೆ ಅನ್ಯ ಮಾರ್ಗ ಬಳಸುವಂತಾಗಿದೆ. ಇದರಿಂದಾಗಿ ಭೂಮಿಯ ಬೆಲೆ ಕಡಿಮೆಯಾಗುತ್ತದೆ ಹಾಗೂ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ. ಗ್ರಾಹಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಅಂಗಡಿ ಮಾಲೀಕರು ಕಲ್ಪಿಸಿಕೊಡಬೇಕು. ರಸ್ತೆ ಬದಿಯ ಅಂಗಡಿಗಳಿಗೆ ಕಾನೂನು ಕ್ರಮ ಜರುಗಿಸಬೇಕು ಗೋಣಿಕೊಪ್ಪದಲ್ಲಿ ಆಡಳಿತ ಅಧಿಕಾರದಲ್ಲಿರುವವರು ಟ್ರಾಫಿಕ್ ಸಮಸ್ಯೆಗೆ ಬೇಕಾದ ಪರ್ಯಾಯ ವ್ಯವಸ್ಥೆಯನ್ನು ಪಟ್ಟಣಕ್ಕೆ ಧಕ್ಕೆ ಬಾರದಂತೆ ಕಲ್ಪಿಸಿಕೊಡಬೇಕು ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಿ ಆದಷ್ಟು ಶೀಘ್ರ ಸಮಸ್ಯೆಗೆ ಮುಕ್ತಿ ದೊರಕಿಸಿ ಕೊಡಬೇಕೆಂದರು.

ಒಟ್ಟಿನಲ್ಲಿ ವಾಣಿಜ್ಯನಗರಿಯಲ್ಲಿ ಮಿತಿಮೀರಿದ ಟ್ರಾಫಿಕ್ ಜಾಮ್ ಸಮಸ್ಯೆ, ವಾಹನಗಳ ಚಾಲಕರನ್ನು ಹೈರಾಣಾಗಿಸಿದ್ದರೇ, ವ್ಯಾಪಾರ ವಹಿವಾಟಿಗೂ ಧಕ್ಕೆ ತಂದೊಡ್ಡಿರುವುದು ಸುಳ್ಳಲ್ಲ.

ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0