40 ವರ್ಷದ ಅಂಕಲ್ ಗೆ 19 ವರ್ಷದ ಯುವತಿಯೊಂದಿಗೆ ಪ್ರೇಮ ಸಂಬಂಧ: ಕುಣಿಗಲ್ ಮೂಲದ ವ್ಯಕ್ತಿ ಹತ್ಯೆ

Dec 19, 2025 - 22:26
Dec 20, 2025 - 11:06
 0  1.4k
40 ವರ್ಷದ ಅಂಕಲ್ ಗೆ 19 ವರ್ಷದ ಯುವತಿಯೊಂದಿಗೆ ಪ್ರೇಮ ಸಂಬಂಧ: ಕುಣಿಗಲ್ ಮೂಲದ ವ್ಯಕ್ತಿ ಹತ್ಯೆ

ರಾಮನಗರ, ಡಿ. 19: 19 ವರ್ಷದ ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬನನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಗಟ್ಟಿಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಮೃತನನ್ನು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಗ್ರಾಮದ ನಿವಾಸಿ ಚಲುವ (40) ಎಂದು ಗುರುತಿಸಲಾಗಿದೆ. ಈತ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಚಲುವ ಮಾಗಡಿ ತಾಲ್ಲೂಕಿನ ದೋಣಕುಪ್ಪೆ ಗ್ರಾಮದ ನಿವಾಸಿ ಕೆಂಪಣ್ಣ ಎಂಬುವರ 19 ವರ್ಷದ ಪುತ್ರಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಸುಮಾರು ಹದಿನೈದು ದಿನಗಳ ಹಿಂದೆ ಇಬ್ಬರೂ ಮನೆ ಬಿಟ್ಟು ಹೊರಟಿದ್ದು, ಮಂಡ್ಯ ಜಿಲ್ಲೆಯ ಕೆ.ಎಂ. ದೊಡ್ಡಿಯ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ನಂತರ ರಾಜಿ ಪಂಚಾಯಿತಿ ನಡೆದು ಯುವತಿಯನ್ನು ಆಕೆಯ ಮನೆಯವರಿಗೆ ವಾಪಸ್ ಒಪ್ಪಿಸಲಾಗಿತ್ತು.

ಈ ಘಟನೆ ಬಳಿಕ ಯುವತಿಯನ್ನು ಮನೆಯಲ್ಲೇ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿ ಚಲುವ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಪ್ರಕಟಿಸಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಯುವತಿಯ ತಂದೆ ಕೆಂಪಣ್ಣ, ತನ್ನ ಸಂಬಂಧಿಕರಾದ ರಾಮಕೃಷ್ಣ ಮತ್ತು ಮಂಜು ಅವರೊಂದಿಗೆ ಸೇರಿ ಡಿಸೆಂಬರ್ 18ರಂದು ಕುಣಿಗಲ್ ಪಟ್ಟಣದಿಂದ ಚಲುವನನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಚಲುವನನ್ನು ಕಾರಿನಲ್ಲಿ ವಿವಿಧ ಸ್ಥಳಗಳಿಗೆ ಕರೆದೊಯ್ದು, ಬಳಿಕ ಕತ್ತು ಕೊಯ್ದು ಹತ್ಯೆ ಮಾಡಿ ಮಾಗಡಿ ತಾಲ್ಲೂಕಿನ ಗಟ್ಟಿಪುರ ಗ್ರಾಮದ ಹೊರವಲಯದ ಹಳ್ಳದ ಬಳಿ ಮೃತದೇಹವನ್ನು ಎಸೆದು ಪರಾರಿಯಾಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಬೆಳಗ್ಗೆ ಹಳ್ಳದ ಬಳಿ ಶವ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಹರಣ ಕುಣಿಗಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಕುಣಿಗಲ್ ಠಾಣೆಗೆ ವರ್ಗಾಯಿಸಲಾಗಿದೆ.

ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಹತ್ಯೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 4
Wow Wow 0