CRIME

7.11 ಕೋಟಿ ರೂಪಾಯಿ ಎಟಿಎಂ ವಾಹನ ದರೋಡೆ: 7 ವರ್ಷ ಹಳೆಯ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದ ಬಂಧಿತ ಆರೋಪಿ

admincoorgdaily

ಬೆಂಗಳೂರು: ನಗರದಲ್ಲಿ 7.11 ಕೋಟಿ ರೂಪಾಯಿ ಎಟಿಎಂ ವಾಹನ ದರೋಡೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ರವಿ ಎಂಬಾತ, 2018ರಲ್ಲಿ ವರ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ ಎಂಬ ಹೊಸ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಏಳು ವರ್ಷಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಈತನನ್ನು ಇದೀಗ ಮೊದಲ ಬಾರಿಗೆ ಬಂಧಿಸಲಾಗಿದೆ.

2018ರಲ್ಲಿ ಬಾಣಸವಾಡಿ ರೌಡಿಶೀಟರ್‌ ಚೆಲ್ಲಾ ಕುಮಾರ್‌ ಹತ್ಯೆ ಪ್ರಕರಣದಲ್ಲಿ ರವಿ ಸಂಚು ರೂಪಿಸಿದವರಲ್ಲಿ ಒಬ್ಬನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಬಾಣಸವಾಡಿಯಲ್ಲಿ ಟ್ರಾವೆಲ್ಸ್‌ ಏಜೆನ್ಸಿ ನಡೆಸುತ್ತಿದ್ದ ಈತ ಇತ್ತೀಚೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದನು. ಅವನ ಸಹೋದರ ರಾಕೇಶ್ ಸಹ ದರೋಡೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ಇಬ್ಬರೂ ಚಿತ್ತೂರು ಮೂಲದವರಾಗಿದ್ದಾರೆ. ಬಂಧಿತರ ಪೈಕಿ ಜಿತೇಶ್ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಕಿರುಕುಳ ಮತ್ತು ಅಪಘಾತ ಪ್ರಕರಣಗಳೂ ದಾಖಲಾಗಿವೆ.

ಗೋವಿಂದಪುರ ಠಾಣೆಯ ಕಾನ್‌ಸ್ಟೆಬಲ್‌ ಅಣ್ಣಪ್ಪ ನಾಯ್ಕ್ ಹಾಗೂ ಸಿಎಂಎಸ್ ಏಜೆನ್ಸಿಯ ಮಾಜಿ ಉದ್ಯೋಗಿ ಕ್ಸೇವಿಯರ್ ಸೇರಿ ಆರು ಮಂದಿಯನ್ನು ಮೊದಲು ಬಂಧಿಸಿ 5.76 ಕೋಟಿ ರೂ. ವಶಪಡಿಸಿಕೊಂಡಿದ್ದರು. ನಂತರ ನಡೆದ ಕಾರ್ಯಾಚರಣೆಯಲ್ಲಿ ಮತ್ತೂ ಮೂವರನ್ನು ಬಂಧಿಸಿ 1.45 ಕೋಟಿ ರೂ. ಹೆಚ್ಚುವರಿ ನಗದು ವಶಕ್ಕೆ ಪಡೆದಿದ್ದಾರೆ. ಈಗ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಹಣ ಪತ್ತೆಗೆ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

 ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಆರೋಪಿಗಳು ಎಟಿಎಂ ವಾಹನವನ್ನು ಅಡ್ಡಗಟ್ಟಿ ದರೋಡೆ ನಡೆಸಿದ್ದರು. ಘಟನೆ ನಡೆದ ಮೇಲೆ ಎರಡು ಗಂಟೆಗಳ ಬಳಿಕ ಮಾತ್ರ ಮಾಹಿತಿ ನೀಡಿರುವುದು ಕಳವಳಕಾರಿ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. 

ಎಟಿಎಂ ವಾಹನದಲ್ಲಿದ್ದ ಇಬ್ಬರು ಗನ್ ಮ್ಯಾನ್ ಸೇರಿದಂತೆ ನಾಲ್ವರನ್ನು ವಿಚಾರಣೆಗೊಳಪಡಿಸಲಾಗಿದೆ. ಸಿಬ್ಬಂದಿ ನೇರವಾಗಿ ಶಾಮಿಲಾಗಿರುವ ಯಾವುದೇ ಸುಳಿವು ಇದುವರೆಗೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.