ಡ್ರಾಪ್ ನೀಡಿದ ಬೈಕ್ ಸವಾರನನ್ನೇ ಕುಡಿದ ಮತ್ತಿನಲ್ಲಿ ಚಾಕುವಿನಿಂದ ಹಲ್ಲೆ

ಡ್ರಾಪ್ ನೀಡಿದ ಬೈಕ್ ಸವಾರನನ್ನೇ ಕುಡಿದ ಮತ್ತಿನಲ್ಲಿ ಚಾಕುವಿನಿಂದ ಹಲ್ಲೆ

ಬೆಂಗಳೂರು: ಕುಡಿದ ಮತ್ತಿನಲ್ಲಿ ಡ್ರಾಪ್​ ಪಡೆದುಕೊಂಡು ದ್ವಿಚ್ರಕವಾಹನ ಸವಾರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಹೆಚ್​​.ಎಸ್​​. ಸಂದೀಪ್​​​​ ಹಾಗೂ ಶ್ಯಾಮ್​​​ ಎಂಬುವರನ್ನು ಬಂಧಿಸಲಾಗಿದೆ.

ಬಂಧಿತರಿಂದ ಸುಮಾರು 2.20 ಲಕ್ಷ ಮೌಲ್ಯದ ಬೈಕ್​​, ಮೊಬೈಲ್​​ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ಒದಗಿಸಿದ್ದಾರೆ.

ಘಟನೆಯ ಹಿನ್ನೆಲೆ ಹೀಗಿದೆ: ಮಾರ್ಚ್​ 25ರ ಬೆಳಗಿನ ಜಾವ 2.30ರ ವೇಳೆ ವ್ಯಕ್ತಿಯೊಬ್ಬರು ತನ್ನ ಬೈಕ್​ನಲ್ಲಿ ತೆರಳುವಾಗ ಹುಣಸಮಾರನಹಳ್ಳಿ ಬಳಿ ಇಬ್ಬರು ಆರೋಪಿಗಳು ಡ್ರಾಪ್ ನೀಡುವಂತೆ ಕೇಳಿಕೊಂಡಿದ್ದರು. ಇಬ್ಬರನ್ನು ಕೂರಿಸಿಕೊಂಡು ಹೊಸಹಳ್ಳಿಯ ರಸ್ತೆ ಬಳಿ ಬರುತ್ತಿದ್ದಂತೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದರು.

 ಬೈಕ್​​​​​​ನಿಂದ ಕೆಳಗಿಳಿಯುತ್ತಿದ್ದಂತೆ ಬೆದರಿಸಿ ಚಾಕು ಹಾಗೂ ಹೆಲ್ಮೆಟ್​ನಿಂದ ಹಲ್ಲೆ ಮಾಡಿದ್ದಾರೆ.

 ಬಂಧಿತರ ಮೇಲೆ ಕಳ್ಳತನ ಪ್ರಕರಣಗಳು ದಾಖಲು: ಅವಾಚ್ಯ ಶಬ್ಧಗಳಿಂದ ನಿಂದಿಸಿ ವ್ಯಕ್ತಿಯ ಬೈಕ್​, ಪರ್ಸ್ ಹಾಗೂ ಮೊಬೈಲ್ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಹುಣಸಮಾರನಹಳ್ಳಿ ನಿವಾಸಿಗಳಾದ ಇಬ್ಬರನ್ನು ಬಂಧಿಸಲಾಗಿದೆ. ಇಬ್ಬರು ಮೇಲೂ ತಲಾ ಒಂದು ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಚಿಕ್ಕಜಾಲ ಪೊಲೀಸರು ಮಾಹಿತಿ ನೀಡಿದ್ದಾರೆ.