National News

ಕಾಡಿನಲ್ಲಿ ಮೈಕೊರೆವ ಚಳಿಯಲ್ಲೂ ಪೋಷಕರ ಶವದ ಪಕ್ಕದಲ್ಲೇ ಇಡೀ ರಾತ್ರಿ ಕಳೆದ ಐದು ವರ್ಷದ ಬಾಲಕ!

admincoorgdaily

Photo credit: Etv bharath

ದಿಯೋಗಢ (ಒಡಿಶಾ), ಡಿ. 29: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪೋಷಕರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ದಿಯೋಗಢ ಜಿಲ್ಲೆಯಲ್ಲಿ ನಡೆದಿದ್ದು, ಅವರ ಐದು ವರ್ಷದ ಮಗ ಮೈಕೊರೆವ ಚಳಿಯ ನಡುವೆಯೂ ಕಾಡಿನಲ್ಲೇ ಇಡೀ ರಾತ್ರಿ ಪೋಷಕರ ಶವಗಳ ಪಕ್ಕದಲ್ಲೇ ಉಳಿದು ಬದುಕುಳಿದಿರುವುದು ಮನಕಲಕುವ ಸಂಗತಿಯಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಧಿಗೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಜಿಯಾನಂತಪಾಲಿ ಗ್ರಾಮದ ನಿವಾಸಿಗಳಾದ ದುಷ್ಮಂತ್ ಮಾಜ್ಹಿ ಮತ್ತು ಅವರ ಪತ್ನಿ ರಿಂಕಿ ಅವರು ಡಿಸೆಂಬರ್ 27ರಂದು ತಮ್ಮ ಐದು ವರ್ಷದ ಮಗ ಗೌರವ್‌ನೊಂದಿಗೆ ಮನೆ ಸಮೀಪದ ಕಾಡಿನೊಳಗೆ ತೆರಳಿದ್ದರು. ಅಲ್ಲಿ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದ್ದು, ನಂತರ ಇಬ್ಬರೂ ಬಾಲಕನ ಎದುರಲ್ಲೇ ಕೀಟನಾಶಕ ಸೇವಿಸಿದ್ದಾರೆ ಎನ್ನಲಾಗಿದೆ. ಮಗನಿಗೂ ವಿಷ ಸೇವಿಸಲು ಅವರು ಸೂಚಿಸಿದ್ದರೂ, ಬಾಲಕ ಅದಕ್ಕೆ ಒಪ್ಪಿಲ್ಲ.

ವಿಷಸೇವನೆಯಿಂದ ಪೋಷಕರು ಕಾಡಿನಲ್ಲೇ ಅಸ್ವಸ್ಥರಾಗಿ ಬಿದ್ದಿದ್ದರೆ, ಬಾಲಕ ಗೌರವ್ ಮೈಕೊರೆವ ಚಳಿಯನ್ನು ತಡೆದುಕೊಂಡು ಇಡೀ ರಾತ್ರಿ ಅಲ್ಲಿಯೇ ಉಳಿದಿದ್ದಾನೆ. ಭಾನುವಾರ ಬೆಳಗ್ಗೆ ಕಾಡಿನ ಬಳಿಯ ರಸ್ತೆಯ ಬಳಿ ನಿಂತಿದ್ದ ಬಾಲಕನನ್ನು ಗಮನಿಸಿದ ದಾರಿಹೋಕನೊಬ್ಬ ವಿಚಾರಿಸಿದಾಗ, ಈ ಘಟನೆ ಬೆಳಕಿಗೆ ಬಂದಿದೆ. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ತೆರಳಿ ದುಷ್ಮಂತ್, ರಿಂಕಿ ಮತ್ತು ಗೌರವ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯಕೀಯ ತಪಾಸಣೆಯಲ್ಲಿ ದುಷ್ಮಂತ್ ಮೃತಪಟ್ಟಿರುವುದು ದೃಢಪಟ್ಟಿತು. ಗಂಭೀರ ಸ್ಥಿತಿಯಲ್ಲಿದ್ದ ರಿಂಕಿಯನ್ನು ಅಂಗುಲ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಕೂಡ ಸಾವಿಗೀಡಾಗಿದ್ದಾರೆ.

ಇಡೀ ರಾತ್ರಿ ಚಳಿಯಲ್ಲಿ ಕಾಡಿನಲ್ಲಿ ಕಳೆದ ಬಾಲಕ ಗೌರವ್‌ನ ಸ್ಥಿತಿಯೂ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕೌಟುಂಬಿಕ ಕಲಹದ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.