ಸಾಲಕ್ಕೆ ಕಬಾಬ್ ಕೊಡದ ಅಡುಗೆ ಸಹಾಯಕನ ಮೇಲೆ ಪುಂಡರಿಂದ ಹಲ್ಲೆ!

Nov 2, 2025 - 23:05
 0  579
ಸಾಲಕ್ಕೆ ಕಬಾಬ್ ಕೊಡದ ಅಡುಗೆ ಸಹಾಯಕನ ಮೇಲೆ ಪುಂಡರಿಂದ ಹಲ್ಲೆ!

ಚಿಕ್ಕಬಳ್ಳಾಪುರ, ನ. 02: ಸಾಲವಾಗಿ ಕಬಾಬ್ ನೀಡಲು ನಿರಾಕರಿಸಿದ ಅಡುಗೆ ಸಹಾಯಕನ ಮೇಲೆ ಪುಂಡರ ಗುಂಪೊಂದು ಕ್ರೂರ ಹಲ್ಲೆ ನಡೆಸಿದ ಘಟನೆ ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಶನಿವಾರ ರಾತ್ರಿ ನಡೆದಿದೆ.

ಹಲ್ಲೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಾಯಗೊಂಡ ಅಡುಗೆ ಸಹಾಯಕ ಗಣೇಶ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ತಿಪ್ಪೇನಹಳ್ಳಿ ಮೂಲದ ಸುನೀಲ್ ಎಂಬ ಯುವಕ ಎಪಿಎಂಸಿ ಮಾರುಕಟ್ಟೆಯ ಚೇತನ್ ಬಾರ್ ಪಕ್ಕದಲ್ಲಿ “ಸಿರಿ ಎಗ್ರೈಸ್ ಅಂಡ್ ಕಬಾಬ್ ಹೋಟೆಲ್” ನಡೆಸುತ್ತಿದ್ದರು. ದಿನನಿತ್ಯದ ಆದಾಯದಿಂದ ಜೀವನ ಸಾಗಿಸುತ್ತಿದ್ದ ಈ ಹೋಟೆಲ್‌ನಲ್ಲಿ ಗಣೇಶ್ ಅಡುಗೆ ಕೆಲಸ ಮಾಡುತ್ತಿದ್ದರು.

ಮೂರು ದಿನಗಳಿಂದ ಕಣಜೇನಹಳ್ಳಿ ಗ್ರಾಮದ ನಾಗರಾಜು ಎಂಬಾತ ಕುಡಿದು ಬಂದು ಸಾಲವಾಗಿ ಕಬಾಬ್ ಕೇಳುತ್ತಿದ್ದ. ಹೋಟೆಲ್ ಮಾಲೀಕರು ಇಲ್ಲದ ಕಾರಣ ಗಣೇಶ್ ಸಾಲ ನೀಡಲು ನಿರಾಕರಿಸಿದಾಗ, ಕೋಪಗೊಂಡ ನಾಗರಾಜು ತನ್ನ ಸಹಚರರನ್ನು ಕರೆಸಿ ಕೈಗೆ ಸಿಕ್ಕ ವಸ್ತುಗಳಿಂದ ಗಣೇಶ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ತೀವ್ರ ಹಲ್ಲೆಯ ಬಳಿಕ ಗಣೇಶ್ ಪ್ರಾಣರಕ್ಷಣೆಗೆ ಓಡಿಹೋಗಿ ಬಚ್ಚಿಕೊಂಡಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. 

ಸಾಲ ಪಡೆದ ಹಣದಿಂದ ಹೋಟೆಲ್ ಆರಂಭಿಸಿದ್ದ ಸುನೀಲ್ ಅವರ ಜೀವನೋಪಾಯ ಇದೇ ಆಗಿದ್ದು, ಕೆಲ ಮದ್ಯಪಾನಿಗಳು ಆಗಾಗ ಸಾಲಕ್ಕಾಗಿ ಗಲಾಟೆ ಮಾಡುತ್ತಿದ್ದರೆಂದು ವ್ಯಾಪಾರಿಗಳು ತಿಳಿಸಿದ್ದಾರೆ.

ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 1
Wow Wow 0