ತಡಿಯಂಡಮೋಳ್ ಬೆಟ್ಟಕ್ಕೆ ತೆರಳಿದ್ದ ಮಹಿಳೆ ನಾಪತ್ತೆ
ಮಡಿಕೇರಿ: ಯವಕಪಾಡಿ ಗ್ರಾಮದ ಹೋಂಸ್ಟೇಯಲ್ಲಿ ತಂಗಿ ಬೆಟ್ಟಕ್ಕೆ ತೆರಳಿದ್ದ ಶರಣ್ಯ (36) ಎಂಬುವವರು ನಾಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದೆ.
ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿ ಬಂದ ಈ ಮಹಿಳೆ ಒಬ್ಬಳೇ ಇರುವುದರಿಂದ ಈ ವ್ಯಾಪ್ತಿಯಲ್ಲಿ ಕಾಡಾನೆ ಇರುವಿಕೆ ಇದ್ದಾಗ ಬೇರೆ ಪ್ರವಾಸಿಗರ ಜೊತೆಯಲ್ಲಿ ಕಳುಹಿಸಲಾಗಿದೆ. ಬೆಟ್ಟಕ್ಕೆ ತೆರಳಿದ್ದ ಇತರ ಪ್ರವಾಸಿಗರು ಹಿಂತಿರುಗಿ ಬಂದರೂ ಶರಣ್ಯ ಹಿಂತಿರುಗಿ ಬಾರದ ಕಾರಣ ಅರಣ್ಯ ಸಿಬ್ಬಂದಿಗಳಿಗೆ ಸ್ಥಳೀಯರು ವಿಷಯವನ್ನು ತಿಳಿಸಿದ್ದಾರೆ.
ಈ ಬಗ್ಗೆ ಅಲ್ಲಿಯ ಸ್ಥಳೀಯ ನಿವಾಸಿ ಕುಡಿಯರ ಮುತ್ತಪ್ಪ ಎಂಬವರು ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಬಳಿಕ ಅರಣ್ಯ ಇಲಾಖೆಯವರು ಹಾಗೂ ಪೊಲೀಸರು, ಗ್ರಾಮಸ್ಥರು ಬೆಟ್ಟದಲ್ಲೆಲ್ಲ ಹುಡುಕಾಡಿದರೂ ಮಹಿಳೆಯ ಸುಳಿವು ದೊರೆತಿಲ್ಲ ಎನ್ನಲಾಗಿದೆ.
ಕತ್ತಲಾಗಿರುವುದರಿಂದಾಗಿ ತಾ. 3 ರಂದು (ಇಂದು) ಕಾರ್ಯಾಚರಣೆ ಮಾಡಲಿರುವುದಾಗಿ ಕುಡಿಯರ ಮುತ್ತಪ್ಪ ತಿಳಿಸಿದ್ದಾರೆ. ಆಕೆಯ ಮೊಬೈಲ್ ಮಲಯಾಳಂ ನೆಟ್ವರ್ಕ್‌ನಲ್ಲಿರುವುದಾಗಿ ತಿಳಿದು ಬಂದಿದ್ದು, ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ, ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಅಲ್ಲಿಯೇ ಬೀಡು ಬಿಟ್ಟಿದ್ದಾರೆ.
