State News

ಅನೈತಿಕ ಸಂಬಂಧದಿಂದ ಹಿಂದೆ ಸರಿದ ಯುವಕನ ಮೇಲೆ ಮಹಿಳೆಯಿಂದಲೇ ಹಲ್ಲೆ

admincoorgdaily

ಅನೈತಿಕ ಸಂಬಂಧದಿಂದ ಹಿಂದೆ ಸರಿದ ಯುವಕನ ಮೇಲೆ ಮಹಿಳೆಯಿಂದಲೇ ಹಲ್ಲೆ

ದೇವನಹಳ್ಳಿ, ಡಿ.22: ಅನೈತಿಕ ಸಂಬಂಧವನ್ನು ಮುಂದುವರಿಸದಿರಲು ನಿರ್ಧರಿಸಿದ್ದ ಯುವಕನ ಮೇಲೆ ಮಹಿಳೆಯೊಬ್ಬಳು ಗ್ಯಾಂಗ್‌ ಕಟ್ಟಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾರ್ವಜನಿಕರ ಮಧ್ಯಪ್ರವೇಶದಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಾರ್ತಿಕ್ ಎಂಬ ಯುವಕ ದೀಪಾ ಎಂಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಕುಟುಂಬದವರ ಬುದ್ಧಿವಾದದ ಹಿನ್ನೆಲೆಯಲ್ಲಿ ಆಕೆಯ ಸಹವಾಸದಿಂದ ದೂರ ಉಳಿಯಲು ಕಾರ್ತಿಕ್ ನಿರ್ಧರಿಸಿದ್ದನು. ಇದರಿಂದ ಆಕ್ರೋಶಗೊಂಡ ದೀಪಾ, ಆತನ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 13ರ ಸಂಜೆ, ಕಾರ್ತಿಕ್ ಅಂಗಡಿಯೊಂದರ ಬಳಿ ಇದ್ದಾಗ ಕಾರಿನಲ್ಲಿ ಬಂದ ದೀಪಾ ಹಾಗೂ ಆಕೆಯ ಸಹಚರರು ಲಾಂಗ್ ಮತ್ತು ಮಚ್ಚುಗಳಿಂದ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭ ಸಾರ್ವಜನಿಕರು ಮಧ್ಯ ಪ್ರವೇಶಿಸಿದ ಪರಿಣಾಮ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ದೀಪಾ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.