ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣಗೆ ಕೋರ್ಟ್ ಶಾಕ್ : ‘ಬಿ’ ರಿಪೋರ್ಟ್ ತಿರಸ್ಕಾರ, ತನಿಖೆ ಮುಂದುವರಿಕೆ
ಬೆಂಗಳೂರು/ಹಾಸನ: ಯುವಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರಿಗೆ ಕೋರ್ಟ್ ದೊಡ್ಡ ಹೊಡೆತ ನೀಡಿದೆ. ವಿಶೇಷ ತನಿಖಾ ತಂಡ (ಎಸ್ಐಟಿ) ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಅಪೂರ್ಣವಾಗಿದೆ ಎಂದು ಕೋರ್ಟ್ ಸೂಚನೆ ನೀಡಿದ್ದು, ತನಿಖೆಯನ್ನು ಮುಂದುವರಿಸಿ ಡಿಸೆಂಬರ್ 29ರೊಳಗೆ ಹೊಸ ವರದಿ ಸಲ್ಲಿಸುವಂತೆ ಎಸ್ಐಟಿಗೆ ಆದೇಶಿಸಿದೆ.
ಜೆಡಿಎಸ್ ಕಾರ್ಯಕರ್ತನ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜೂನ್ 23ರಂದು ಸೂರಜ್ ರೇವಣ್ಣರನ್ನು ಬಂಧಿಸಲಾಗಿತ್ತು. ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದರಿಂದ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಒಂದು ತಿಂಗಳ ಬಳಿಕ ಬಿಡುಗಡೆಯಾದರು.
ಸಂತ್ರಸ್ತ ಯುವಕ ನೀಡಿದ ದೂರು ಆಧಾರದ ಮೇಲೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ, ಹಣಕ್ಕಾಗಿ ಸುಳ್ಳು ಆರೋಪ ಮಾಡಲಾಗಿದೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಸಂತ್ರಸ್ತನ ವಿರುದ್ಧ ಪ್ರತಿದೂರು ಸಲ್ಲಿಸಿದ್ದರು. ಬ್ಲ್ಯಾಕ್ಮೇಲ್ ಆರೋಪಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು.