ಶಿಕ್ಷಕಿಯ ಮೇಲೆ ಆಸಿಡ್ ದಾಳಿ; ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು

Sep 27, 2025 - 12:49
 0  769
ಶಿಕ್ಷಕಿಯ ಮೇಲೆ ಆಸಿಡ್ ದಾಳಿ; ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು

ಸಂಭಾಲ್ (ಉತ್ತರ ಪ್ರದೇಶ): ಶಿಕ್ಷಕಿಯ ಮೇಲೆ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಿಶು ತಿವಾರಿ (30) ಗುರುವಾರ ರಾತ್ರಿ ಪೊಲೀಸರು ಕಾಲಿಗೆ ಗುಂಡಿಕ್ಕಿ ಬಂಧಿಸಿದ ಘಟನೆ ಸಂಭಾಲ್‌ನಲ್ಲಿ ನಡೆದಿದೆ.

 ಪೊಲೀಸರ ಮಾಹಿತಿ ಪ್ರಕಾರ, ಕಲ್ಯಾಣ್‌ಪುರ ಗ್ರಾಮದ ಬಳಿ ತಿವಾರಿ, ಅಧಿಕಾರಿಗಳ ಮೇಲೆ ಗುಂಡು ಹಾರಿಸಿದಾಗ ಪೊಲೀಸರು ಪ್ರತಿದಾಳಿ ನಡೆಸಿ ಅವನ ಕಾಲಿಗೆ ಗುಂಡು ಹಾರಿಸಿದರು. ನಂತರ ಅವನನ್ನು ಬಂಧಿಸಿ ತುರ್ತು ಚಿಕಿತ್ಸೆಗೆ ಸಂಭಾಲ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.

ಸೆಪ್ಟೆಂಬರ್ 23ರಂದು, ನಖಾಸಾ ಪೊಲೀಸ್ ಠಾಣಾ ವ್ಯಾಪ್ತಿಯ ದೇಹಪಾ ಗ್ರಾಮದ ಬಳಿ ಮನೆಗೆ ಮರಳುತ್ತಿದ್ದ 22 ವರ್ಷದ ಶಾಲಾ ಶಿಕ್ಷಕಿಯ ಮೇಲೆ ನಿಶು ತಿವಾರಿ ಸ್ಕೂಟರ್‌ ನಲ್ಲಿ ಬಂದು ಆಸಿಡ್ ಎರಚಿದ್ದ. ಘಟನೆಯಲ್ಲಿ ಶಿಕ್ಷಕಿಯ ದೇಹದ 20ರಿಂದ 30 ಶೇಕಡಾ ಭಾಗ ಸುಟ್ಟಿದ್ದು, ಪ್ರಸ್ತುತ ಆಕೆಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 ಈ ಭೀಕರ ದಾಳಿಯ ನಂತರ ಜಿಲ್ಲಾ ಮಟ್ಟದಲ್ಲಿ ಮಿಷನ್ ಶಕ್ತಿ ಅಭಿಯಾನದಡಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಪೊಲೀಸ್ ವೃತ್ತಾಧಿಕಾರಿ ಕುಲದೀಪ್ ಸಿಂಗ್ ನೇತೃತ್ವದಲ್ಲಿ ಹಲವಾರು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು. ಇದೇ ಕಾರ್ಯಾಚರಣೆಯ ವೇಳೆ ಗುರುವಾರ ತಡರಾತ್ರಿ ತಿವಾರಿ ಪತ್ತೆಯಾಗಿದ್ದಾನೆ ಎಂದು ಸಂಭಾಲ್ ಎಸ್‌ಪಿ ಕೃಷ್ಣ ಕುಮಾರ್ ಬಿಷ್ಣೋಯ್ ತಿಳಿಸಿದ್ದಾರೆ.

 ಗುಂಡಿನ ದಾಳಿ ನಡೆಸಿದ ಸ್ಥಳದಿಂದ ದೇಶೀಯ ಪಿಸ್ತೂಲ್, ಗುಂಡಿನ ಕಾರ್ಟ್ರಿಡ್ಜ್‌ಗಳು ಹಾಗೂ ಅಪರಾಧಕ್ಕೆ ಬಳಸಿದ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ವಿಚಾರಣೆ ನಡೆಶಲಾಗುತ್ತಿದ್ದು, ವಿಧಿವಿಜ್ಞಾನಿ ಪುರಾವೆಗಳ ಸಂಗ್ರಹಣೆ ಪ್ರಕ್ರಿಯೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಈ ಘಟನೆಯು ಸ್ಥಳೀಯರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದ್ದು, ಅಪರಾಧಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ದಾಳಿಗೊಳಗಾದ ಶಿಕ್ಷಕಿಯ ಸ್ಥಿತಿ ಗಂಭೀರವಾಗಿರುವುದರಿಂದ ಪ್ರಕರಣದ ತನಿಖೆ ವೇಗವಾಗಿ ಸಾಗುತ್ತಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0