ಬಜೆಟ್ ಅಧಿವೇಶನ ನಂತರ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ನಿವೇಶನ ಹಕ್ಕುಪತ್ರ ವಿತರಣೆ; ಶಾಸಕ ಎಎಸ್ ಪೊನ್ನಣ್ಣ
ಮಡಿಕೇರಿ ಫೆ.21(ಕ.ವಾ):- ಇದೇ ಬಜೆಟ್ ಅಧಿವೇಶನ ನಂತರ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ನಿವೇಶನ ಹಕ್ಕುಪತ್ರ ನೀಡಲು ಮುಂದಾಗಲಾಗಿದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ನಿವೇಶನ ರಹಿತರಿಗೆ ನಿವೇಶನ ಹಕ್ಕುಪತ್ರ ನೀಡುವ ಬಗ್ಗೆ ವಿವಿಧ ಇಲಾಖೆ ಅಧಿಕಾರಿಗಳ ಜತೆ ಪೊನ್ನಂಪೇಟೆಯ ತಾ.ಪಂ.ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ನವೆಂಬರ್, ಡಿಸೆಂಬರ್ ತಿಂಗಳಲ್ಲಿಯೇ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿ ನಿವೇಶನ ಹಕ್ಕುಪತ್ರ ವಿತರಿಸಲು ಉದ್ದೇಶಿಸಲಾಗಿತ್ತು, ಆದರೆ ತಾಂತ್ರಿಕ ಕಾರಣಗಳಿಂದ ಈ ಆಗಿರಲಿಲ್ಲ ಎಂದರು.
ಸದ್ಯ ಮಾರ್ಚ್ 27 ರ ನಂತರ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿ ನಿವೇಶನ ಹಕ್ಕುಪತ್ರ ವಿತರಿಸಲಾಗುವುದು ಎಂದು ಎ.ಎಸ್.ಪೊನ್ನಣ್ಣ ಅವರು ವಿವರಿಸಿದರು. ಸಮಗ್ರ ಗಿರಿಜನ ಕಲ್ಯಾಣ ಇಲಾಖೆಯಿಂದ ಲೈನ್ ಮನೆಗಳಲ್ಲಿ ವಾಸಿಸುವ ಸುಮಾರು 1125 ಕುಟುಂಬಗಳಿಗೆ, ಹಾಗೆಯೇ ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆ, ಜತೆಗೆ ಸ್ಥಳೀಯ ಸಂಸ್ಥೆ ವ್ಯಾಪ್ತಿ ಸೇರಿದಂತೆ ಒಟ್ಟು ಸುಮಾರು 3 ಸಾವಿರ ನಿವೇಶನ ಹಕ್ಕುಪತ್ರ ವಿತರಿಸಲು ಉದ್ದೇಶಿಸಲಾಗಿದೆ ಎಂದು ಶಾಸಕರು ಹೇಳಿದರು.
ನಿವೇಶನ ಹಕ್ಕುಪತ್ರ ವಿತರಣೆಗೆ ವಿಳಂಬ ಆಗಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಶಾಸಕರು, ತಾಂತ್ರಿಕ ತೊಂದರೆಗಳನ್ನು ಒಂದು ವಾರದಲ್ಲಿ ಬಗೆಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಿವೇಶನ ರಹಿತರ ಫಲಾನುಭವಿಗಳ ಪಟ್ಟಿ ಮಾಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಹಲವು ಬಾರಿ ಚರ್ಚಿಸಲಾಗಿತ್ತು, ಆದರೆ ಇದುವರೆಗೆ ನಿರೀಕ್ಷಿತ ಪ್ರಗತಿ ಸಾಧಿಸದಿರುವುದಕ್ಕೆ ಎ.ಎಸ್.ಪೊನ್ನಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ನಿವೇಶನ ರಹಿತರಿಗೆ ನಿವೇಶನ ನೀಡಲೇಬೇಕು. ಆ ದಿಸೆಯಲ್ಲಿ ಅಧಿಕಾರಿಗಳು ಕಾಲಮಿತಿಯಲ್ಲಿ ಕರ್ತವ್ಯ ನಿರ್ವಹಿಸಿ, ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ವಿವಿಧ ಗ್ರಾ.ಪಂ. ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ಅಂಕಿ ಅಂಶಗಳ ಬಗ್ಗೆ ಶಾಸಕರು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್ ಅವರು ವಸತಿ ಇಲಾಖೆಯಲ್ಲಿ ಅನುಮೋದನೆಗೆ ಬಾಕಿ ಇರುವ ಹಲವು ಕಡತವನ್ನು ಸ್ಥಳದಲ್ಲಿಯೇ ವಿವೇವಾರಿ ಮಾಡಿದರು. ಬಡವರಲ್ಲಿ ಕಡು ಬಡವರಿದ್ದು, ಅಂತಹ ಕುಟುಂಬಕ್ಕೆ ಆಧಾರ್ ಹಾಗೂ ಚುನಾವಣಾ ಗುರುತಿನ ಚೀಟಿ ಮಾಡಿಸಬೇಕು ಎಂದು ಸಲಹೆ ನೀಡಿದರು. ಸಮಗ್ರ ಗಿರಿಜನ ಯೋಜನಾ ಇಲಾಖೆ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ ಅವರು ಮಾಹಿತಿ ನೀಡಿ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ವ್ಯಾಪ್ತಿಯಲ್ಲಿ 116, ಕಳತ್ಮಾಡು ಗ್ರಾಮ ವ್ಯಾಪ್ತಿಯಲ್ಲಿ 127, ಪೊನ್ನಂಪೇಟೆ ತಾಲ್ಲೂಕಿನ ಬಾಳುಗೋಡು ಗ್ರಾಮ ವ್ಯಾಪ್ತಿಯಲ್ಲಿ 37, ಬಿರುನಾಣಿ ಗ್ರಾಮ ವ್ಯಾಪ್ತಿಯಲ್ಲಿ 621 ಹಾಗೂ ಕುರ್ಚಿ ಗ್ರಾಮ ವ್ಯಾಪ್ತಿಯಲ್ಲಿ 224 ಒಟ್ಟು 1125 ಅರ್ಹ ಕುಟುಂಬಕ್ಕೆ ನಿವೇಶನ ಹಕ್ಕುಪತ್ರ ನೀಡಲು ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಒಟ್ಟಾರೆ ಶಾಸಕರ ಪ್ರಯತ್ನದಿಂದ 38 ಎಕರೆ ಭೂಮಿಯಲ್ಲಿ ಲೈನ್ ಮನೆಗಳ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಿಸಲು ಮುಂದಾಗಲಾಗಿದೆ ಎಂದು ಎಸ್. ಹೊನ್ನೇಗೌಡ ಅವರು ವಿವರಿಸಿದರು. ಮಡಿಕೇರಿ ತಾ.ಪಂ.ಇಒ ಶೇಖರ್ ಮಾಹಿತಿ ನೀಡಿ ತಾಲ್ಲೂಕಿನಲ್ಲಿ ನಿವೇಶನ ರಹಿತ 528 ಅರ್ಜಿಗಳಲ್ಲಿ 460 ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಉಳಿದವು ತಾಂತ್ರಿಕ ಕಾರಣದಿಂದ ಬಾಕಿ ಇದೆ ಎಂದು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಕೆ.ಪಿ.ಮೋಹನ್ ರಾಜ್ ಅವರು ಸ್ಥಳದಲ್ಲಿಯೇ ಅನುಮೋದಿಸಿದರು.
ವಿರಾಜಪೇಟೆ ತಾ.ಪಂ.ಇಒ ಅಪ್ಪಣ್ಣ ಮಾಹಿತಿ ನೀಡಿ 354 ಅರ್ಜಿಗಳಲ್ಲಿ 239 ಅರ್ಜಿಗಳಿಗೆ ಅನುಮೋದನೆ ದೊರೆತಿದೆ. ಹಾಗೆಯೇ ಪೊನ್ನಂಪೇಟೆ ತಾಲ್ಲೂಕಿನಲ್ಲಿ 370 ಗುರಿಯಲ್ಲಿ 231 ನಿವೇಶನ ಹಕ್ಕುಪತ್ರ ನೀಡಲು ಸಿದ್ಧವಾಗಿದೆ ಎಂದರು. ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ನಾಚಪ್ಪ ಅವರು ಪೌರಕಾರ್ಮಿಕರಿಗೆ ನಿವೇಶನ ಹಕ್ಕುಪತ್ರ ಹಾಗೂ ಮನೆ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು.
ತಹಶಿಲ್ದಾರರಾದ ಪ್ರವೀಣ್ ಕುಮಾರ್, ಶ್ರೀಧರ ಅವರು ತಮ್ಮ ಹಂತದಲ್ಲಿ ಆಗಬೇಕಿರುವ ಕಾರ್ಯಗಳ ಬಗ್ಗೆ ವಿವರಿಸಿದರು. ಗೋಣಿಕೊಪ್ಪದಲ್ಲಿ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಬಗ್ಗೆ ಪಿಡಿಒ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಿವೇಶನ ಹಕ್ಕುಪತ್ರ ಹಂಚಿಕೆ ಸಂಬಂಧಿಸಿದಂತೆ ಗಂಭೀರವಾಗಿ ಪರಿಗಣಿಸಿ, ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಎಂದು ಹೇಳಿದರು.
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಜಿ.ಪಂ.ವ್ಯಾಪ್ತಿಯಲ್ಲಿ ನಿವೇಶನ ಹಕ್ಕುಪತ್ರ ನೀಡಲು ಬಾಕಿ ಇರುವ ಸುಮಾರು 622 ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದರು. ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕರು ಹಲವು ಮಾಹಿತಿ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.