National News

ಪ್ರಯಾಣಿಕನ ಮೇಲೆ ಹಲ್ಲೆ ಆರೋಪ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್ ಬಂಧನ

admincoorgdaily

Photo credit: Etv bharath (ಫೋಟೋ:ಪೈಲಟ್)

ನವದೆಹಲಿ: ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯ ಪೈಲಟ್‌ನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕ್ಯಾಪ್ಟನ್ ವಿರೇಂದ್ರ ಸೆಜ್ವಾಲ್ ಎಂದು ಗುರುತಿಸಲಾಗಿದೆ. ಡಿಸೆಂಬರ್ 19ರಂದು ನಡೆದ ಘಟನೆಯ ಸಂಬಂಧ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೈಲಟ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 115 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 126 (ತಪ್ಪಾದ ಸಂಯಮ) ಮತ್ತು 351 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿದಿದೆ. ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಇತರ ಪುರಾವೆಗಳ ಪರಿಶೀಲನೆ ನಡೆಯುತ್ತಿದ್ದು, ತನಿಖೆ ಪ್ರಾಥಮಿಕ ಹಂತದಲ್ಲಿದೆ.

ಘಟನೆಯ ಹಿನ್ನೆಲೆ:

ಡಿ.19ರಂದು ಅಂಕಿತ್ ದಿವಾನ್ ಅವರು ತಮ್ಮ ಕುಟುಂಬದೊಂದಿಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರಿಂದ ವಿಮಾನ ಪ್ರಯಾಣಕ್ಕೆ ಆಗಮಿಸಿದ್ದರು. ನಾಲ್ಕು ತಿಂಗಳ ಮಗು ಹಾಗೂ ಏಳು ವರ್ಷದ ಮಗಳೊಂದಿಗೆ ಪ್ರಯಾಣಿಸುತ್ತಿದ್ದ ಕಾರಣ, ವಿಶೇಷ ಸಹಾಯ ಅಗತ್ಯವಿರುವ ಪ್ರಯಾಣಿಕರಿಗೆ ಮೀಸಲಾದ ಭದ್ರತಾ ಮಾರ್ಗದಲ್ಲಿ ಸಾಗುತ್ತಿದ್ದರು. ಈ ವೇಳೆ ಸರದಿ ಉಲ್ಲಂಘನೆ ವಿಚಾರವಾಗಿ ಪೈಲಟ್ ಹಾಗೂ ಪ್ರಯಾಣಿಕನ ನಡುವೆ ವಾಗ್ವಾದ ನಡೆದಿದ್ದು, ಅದು ಹಲ್ಲೆಗೆ ತಿರುಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಘಟನೆಯ ಬಳಿಕ ದಿವಾನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿ, ವಿಮಾನಯಾನ ಸಿಬ್ಬಂದಿಯಿಂದ ಇಂತಹ ವರ್ತನೆ ಸ್ವೀಕಾರಾರ್ಹವೇ ಎಂಬ ಪ್ರಶ್ನೆ ಎತ್ತಿದ್ದರು. ಭದ್ರತಾ ಮಾರ್ಗಗಳ ಸಮರ್ಪಕ ನಿರ್ವಹಣೆ ಇಲ್ಲದಿರುವುದಕ್ಕೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.