ತಮಿಳು ನಟ ವಿಜಯ್ ರ್‍ಯಾಲಿಯಲ್ಲಿ ಕಾಲ್ತುಳಿತ; ಕನಿಷ್ಠ 29 ಮಂದಿ ಮೃತ್ಯು

ತಮಿಳು ನಟ ವಿಜಯ್ ರ್‍ಯಾಲಿಯಲ್ಲಿ ಕಾಲ್ತುಳಿತ; ಕನಿಷ್ಠ 29 ಮಂದಿ ಮೃತ್ಯು
Photo credit: NDTV

ಕರೂರು: ತಮಿಳುನಾಡಿನ ಕರೂರಿನಲ್ಲಿ ನಟ–ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರ್‍ಯಾಲಿಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, ಮಕ್ಕಳು ಸೇರಿದಂತೆ 29 ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಹಿರಿಯ ಪೊಲೀಸ್ ಅಧಿಕಾರಿ ಡೇವಿಡ್ಸನ್ ದೇವಶಿರ್ವತಮ್ ಅವರ ಪ್ರಕಾರ, ಈಗಾಗಲೇ 500ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕನಿಷ್ಠ 400 ಮಂದಿಯನ್ನು ಕರೆತರಲಾಗುತ್ತಿದೆ. “ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ,” ಎಂದು ಅವರು ತಿಳಿಸಿದ್ದಾರೆ.

ವಿಜಯ್ ಅವರ ಅಭಿಮಾನಿಗಳು ಹಾಗೂ ಪಕ್ಷದ ಬೆಂಬಲಿಗರು ಆರು ಗಂಟೆಗಳಿಗೂ ಹೆಚ್ಚು ಕಾಲ ಕಾಯುತ್ತಿದ್ದರು. ವಿಜಯ್ ತಡವಾಗಿ ಆಗಮಿಸಿದರು. ಈ ಸಂದರ್ಭದಲ್ಲಿ ಅಚಾನಕ್ ಉಂಟಾದ ಗದ್ದಲದಿಂದ ಜನಸಮೂಹ ನಿಯಂತ್ರಣ ತಪ್ಪಿ ಕಾಲ್ತುಳಿತ ನಡೆದಿದೆ. ಹಲವರು ಮೂರ್ಛೆ ತಪ್ಪಿ ನೆಲಕ್ಕೆ ಬಿದ್ದಿದ್ದು, ಆಂಬ್ಯುಲೆನ್ಸ್‌ಗಳು ಕಿಕ್ಕಿರಿದ ರಸ್ತೆಗಳಲ್ಲಿ ಸಾಗಲು ಅಡಚಣೆ ಉಂಟಾಯಿತು.

 ಘಟನೆಯ ನಂತರ ರಾಜ್ಯ ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ತಕ್ಷಣ ಕರೂರಿಗೆ ಧಾವಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಜಿಲ್ಲಾ ಕಾರ್ಯದರ್ಶಿ ವಿ. ಸೆಂಥಿಲ್‌ಬಾಲಾಜಿಗೆ ಸೂಚನೆ ನೀಡಿದ್ದಾರೆ.

 “ಕರೂರಿನಲ್ಲಿ ಸಂಭವಿಸಿದ ದುರಂತ ಆತಂಕಕಾರಿ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ,” ಎಂದು ಸಿಎಂ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆ ವರದಿ ಪ್ರಕಾರ, ಹಲವರು ಅಸ್ವಸ್ಥರಾಗುತ್ತಿದ್ದಂತೆ ವಿಜಯ್ ತಮ್ಮ ಭಾಷಣವನ್ನು ಮಧ್ಯದಲ್ಲೇ ನಿಲ್ಲಿಸಿ, ಪ್ರಚಾರ ಬಸ್‌ನಿಂದ ನೀರಿನ ಬಾಟಲಿಗಳನ್ನು ಹಂಚಿದರು. ಆಗ ಜನಸಮೂಹ ಇನ್ನಷ್ಟು ಗೊಂದಲಕ್ಕೀಡಾಯಿತು.

 ಘಟನೆಯ ಸಮಯದಲ್ಲಿ 30,000ಕ್ಕೂ ಹೆಚ್ಚು ಜನರು ರ್‍ಯಾಲಿ ಮೈದಾನದಲ್ಲಿ ಇದ್ದರು. ಈ ಅವ್ಯವಸ್ಥೆಗೆ ವಿಜಯ್ ಅವರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಆಡಳಿತಾರೂಢ ಡಿಎಂಕೆ, ಅವರನ್ನು ಬಂಧಿಸಲು ಆಗ್ರಹಿಸಿದೆ.