ಬಿಜೆಪಿ ಕಾರ್ಯಕರ್ತನ ಮನೆಯ ಆವರಣದಲ್ಲಿ ಪಕ್ಷದ ಕಾರ್ಯಕರ್ತೆ ಬೆಂಕಿ ಹಚ್ಚಿಕೊಂಡು ಮೃತ್ಯು

ಬಿಜೆಪಿ ಕಾರ್ಯಕರ್ತನ ಮನೆಯ ಆವರಣದಲ್ಲಿ ಪಕ್ಷದ ಕಾರ್ಯಕರ್ತೆ ಬೆಂಕಿ ಹಚ್ಚಿಕೊಂಡು ಮೃತ್ಯು

ಕಲಬುರಗಿ: ಕಲಬುರಗಿ ಜಿಲ್ಲೆಯ ನಂದಿಕೂರ್ ಗ್ರಾಮದಲ್ಲಿ (ಬಿಜೆಪಿ) ಕಾರ್ಯಕರ್ತನ ಮನೆಯ ಆವರಣದಲ್ಲಿ ಪಕ್ಷದ ಕಾರ್ಯಕರ್ತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಸಾವಿನ ಹಿನ್ನಲೆ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿವೆ.

ಮೃತರನ್ನು ಜ್ಯೋತಿ ಪಾಟೀಲ್ ಎಂದು ಗುರುತಿಸಲಾಗಿದೆ. ಈ ಘಟನೆ ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರ ಅವರ ಮನೆಯ ಆವರಣದಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮಲ್ಲಿನಾಥ್ ಬಿರಾದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ತಡರಾತ್ರಿ ಜ್ಯೋತಿ ಪಾಟೀಲ್ ಮಲ್ಲಿನಾಥ್ ಬಿರಾದಾರರ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಸಮಯದಲ್ಲಿ ಮಲ್ಲಿನಾಥ್ ಬಿರಾದಾರ ಮನೆಗೆ ಇಲ್ಲದಿದ್ದು, ಅವರ ಪತ್ನಿ ಹಾಗೂ ಮೂವರು ಮಕ್ಕಳು ಮನೆಯಲ್ಲಿದ್ದರು. ಬಾಗಿಲು ತೆರೆದ ಕ್ಷಣದಲ್ಲೇ ಜ್ಯೋತಿ ಪಾಟೀಲ್ ಬೆಂಕಿ ಹಚ್ಚಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿ.

ಘಟನೆಯ ನಂತರ ಮಲ್ಲಿನಾಥ್ ಬಿರಾದಾರರ ಕುಟುಂಬಸ್ಥರು ಮನೆ ಖಾಲಿ ಮಾಡಿಕೊಂಡು ತೆರಳಿದ್ದು, ಸದ್ಯ ಮನೆಗೆ ಬೀಗ ಹಾಕಲಾಗಿದೆ. ಗ್ರಾಮದಲ್ಲಿ ಶೋಕಮಯ ವಾತಾವರಣ ಆವರಿಸಿದೆ.

ಮೃತ ಜ್ಯೋತಿ ಪಾಟೀಲ್ ಅವರು ನಗರದ ಬ್ರಹ್ಮಪುರ ಬಡಾವಣೆಯ ನಿವಾಸಿಯಾಗಿದ್ದರು. ಆದರೆ ಈ ಸಾವು ಆತ್ಮಹತ್ಯೆಯೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ದೊರಕಿಲ್ಲ.

ಇತ್ತ, ಜ್ಯೋತಿ ಪಾಟೀಲ್ ಅವರ ಪತಿ ಚಿದಾನಂದ ಪಾಟೀಲ್ ಅವರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ಇದು ಆತ್ಮಹತ್ಯೆ ಎಂದು ನಂಬಲು ಸಾಧ್ಯವಿಲ್ಲ. ಸಾವಿನ ಹಿಂದೆ ಬೇರೆ ಕಾರಣಗಳಿರಬಹುದೆಂದು ಶಂಕಿಸಿದ್ದಾರೆ.

ಘಟನೆಯ ಎಲ್ಲ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಫರಹತಾಬಾದ್ ಪೊಲೀಸರು ತನಿಖೆ ಮುಂದುವರಿಸಿದ್ದು, ಸಾಕ್ಷ್ಯ ಸಂಗ್ರಹ ಹಾಗೂ ಸಂಬಂಧಪಟ್ಟವರ ವಿಚಾರಣೆ ನಡೆಸಲಾಗುತ್ತಿದೆ.