ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದ ತಪ್ಪಿದ 84 ಲಕ್ಷ ರೂ. ‘ಡಿಜಿಟಲ್ ಅರೆಸ್ಟ್’ ವಂಚನೆ!
ಮಂಗಳೂರು: ಇತ್ತೀಚಿನ ದಿನಗಳಲ್ಲಿ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಸೈಬರ್ ಅಪರಾಧಿಗಳು ಕೋಟ್ಯಂತರ ಹಣ ದೋಚುತ್ತಿರುವ ಸಮಯದಲ್ಲಿ, ಕಿನ್ನಿಗೋಳಿಯಲ್ಲಿ ನಡೆದ ಘಟನೆ ಒಂದು ದೊಡ್ಡ ಅನಾಹುತ ತಪ್ಪಿಸಿದೆ. ಬ್ಯಾಂಕ್ ಮ್ಯಾನೇಜರ್‌ನ ಜಾಗರೂಕತೆ ಹಾಗೂ ಪೊಲೀಸರ ತ್ವರಿತ ಕ್ರಮದಿಂದ 84 ಲಕ್ಷ ರೂ. ವಂಚನೆ ತಡೆಗಟ್ಟಲಾಗಿದೆ.
ಮುಲ್ಕಿಯ ದಾಮಸಕಟ್ಟೆಯ ಹಿರಿಯ ದಂಪತಿಗಳಾದ ಬೆನ್ಡಿಕ್ಟ್ ಫೆರ್ನಾಂಡಿಸ್ (84) ಮತ್ತು ಲಿಲ್ಲಿ ಸಿಸಿಲಿಯಾ ಫೆರ್ನಾಂಡಿಸ್ (71) ಅವರನ್ನು ಡಿಸೆಂಬರ್ 1ರಂದು ಅಪರಿಚಿತರು ಉತ್ತರ ಪ್ರದೇಶ ಸಿಐಡಿ ಅಧಿಕಾರಿಗಳೆಂದು ಪರಿಚಯಿಸಿಕೊಂಡು ವಾಟ್ಸಪ್ ಮೂಲಕ ಸಂಪರ್ಕಿಸಿದ್ದರು. ಅವರ ವಿರುದ್ಧ 6 ಕೋಟಿ ರೂ. ವಂಚನೆ ಪ್ರಕರಣ ದಾಖಲಾಗಿದೆ ಎಂದು ಸುಳ್ಳು ಹೇಳಿ, ಖಾತೆಯಲ್ಲಿರುವ ಹಣವನ್ನು ‘ತನಿಖೆಗಾಗಿ’ ಬೇರೆ ಖಾತೆಗೆ ವರ್ಗಾಯಿಸಬೇಕೆಂದು ಒತ್ತಾಯಿಸಿದ್ದರು. ಈ ಮೂಲಕ ದಂಪತಿಯನ್ನು ‘ಡಿಜಿಟಲ್ ಅರೆಸ್ಟ್’ ಗೆ ಒಳಪಡಿಸಲಾಗಿತ್ತು.
ವಂಚಕರ ಒತ್ತಡಕ್ಕೆ ಒಳಗಾಗಿ, ದಂಪತಿಗಳು ಕಿನ್ನಿಗೋಳಿಯ ಕೆನರಾ ಬ್ಯಾಂಕ್‌ಗೆ ತೆರಳಿ ತಮ್ಮ ಎಫ್‌ಡಿ ಸೇರಿ ಸುಮಾರು 84 ಲಕ್ಷ ರೂ. ಹಣವನ್ನು ನೀಡಿದ ಖಾತೆಗೆ ರವಾನಿಸಲು ಮುಂದಾದರು. ವ್ಯವಹಾರ ಕೈಗೊಳ್ಳುವ ಮುನ್ನ ದೊಡ್ಡ ಮೊತ್ತದ ವರ್ಗಾವಣೆ ಕುರಿತು ಪ್ರಶ್ನಿಸಿದ ಮ್ಯಾನೇಜರ್ ರಾಯಸ್ಟನ್ ಅವರಿಗೆ ದಂಪತಿಗಳು ಸ್ಪಷ್ಟ ಉತ್ತರ ನೀಡದ ಕಾರಣ ಅನುಮಾನ ಬಂತು. ತಕ್ಷಣವೇ ವ್ಯವಹಾರ ಸ್ಥಗಿತಗೊಳಿಸಿ, ಬೀಟ್ ಸಿಬ್ಬಂದಿ ಯಶವಂತ ಕುಮಾರ್ ಹಾಗೂ ಗುಪ್ತಚರ ಸಿಬ್ಬಂದಿ ಕಿಶೋರ್ ಅವರಿಗೆ ಮಾಹಿತಿ ನೀಡಿದರು.
ಸುದ್ದಿ ಪಡೆದ ಮುಲ್ಕಿ ಪೊಲೀಸರು ದಂಪತಿಗಳ ಮನೆಗೆ ತೆರಳಿ, ಅವರ ಮೊಬೈಲ್ ಪರಿಶೀಲಿಸಿದಾಗ ‘ಡಿಜಿಟಲ್ ಅರೆಸ್ಟ್’ ಮೂಲಕ ಸೈಬರ್ ಕಳ್ಳರ ವಶಕ್ಕೆ ಸಿಕ್ಕಿರುವುದು ದೃಢಪಟ್ಟಿತು. ತಕ್ಷಣವೇ ಪೊಲೀಸರು ಬ್ಯಾಂಕ್‌ಗೆ ಸಂಪರ್ಕಿಸಿ ಹಣ ವರ್ಗಾವಣೆ ಪೂರ್ಣವಾಗಿ ನಿಲ್ಲಿಸಿದರು. ದಂಪತಿಗೆ ಸೈಬರ್ ವಂಚನೆ ಬಗ್ಗೆ ತಿಳಿವಳಿಕೆ ನೀಡಿದರು.
ಘಟನೆಯ ಕುರಿತು ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, “ಹಿರಿಯ ದಂಪತಿಯನ್ನು ಹಲವು ದಿನಗಳಿಂದ ವಂಚಕರು ಒತ್ತಡಕ್ಕೆ ಒಳಪಡಿಸಿದ್ದರು. ಅವರ ಎಫ್‌ಡಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಲು ಯತ್ನಿಸಿದ್ದರು. ಆದರೆ ಬ್ಯಾಂಕ್ ಮ್ಯಾನೇಜರ್ ಜಾಗರೂಕತೆಯಿಂದ ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ದೊಡ್ಡ ನಷ್ಟ ತಪ್ಪಿದೆ,” ಎಂದರು.
ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0
