ಚೇರಂಬಾಣೆಯಲ್ಲಿ ಗೋಮಾಂಸ ಮಾರಾಟ ಪತ್ತೆ: ಆರೋಪಿಯ ಬಂಧನ
ಮಡಿಕೇರಿ:ತಾಲ್ಲೂಕಿನ ಚೇರಂಬಾಣೆಯಲ್ಲಿ ಸಂತೆ ದಿನವಾದ ಈ ದಿನ ಮಂಗಳವಾರ ಹಾಡುಹಗಲೇ KA 12 W 9617 ಸ್ಕೂಟರ್ ನಲ್ಲಿ ರಾಜಾರೋಷವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಆರೋಪಿ ಸ್ಥಳೀಯ ಹಸೈನಾರ್ ಎಂಬಾತನನ್ನು ಸ್ಥಳೀಯರು ಹಿಡಿದು ಪೋಲೀಸರಿಗೊಪ್ಪಿಸಿದ್ದಾರೆ.
ಆರೋಪಿ ಹಸೈನಾರ್ ಹಲವು ದಿನಗಳಿಂದ ಗೋಮಾಂಸ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಸರಿಯಾದ ಕಾನೂನು ಕ್ರಮ ಜರುಗಿಸಲು ಪೋಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಕುಕ್ಕೇರ ಅಜಿತ್ ,ಮಾತೆ ಕಾವೇರಿಯ ಪುಣ್ಯಭೂಮಿ ಕೊಡಗಿನಲ್ಲಿ ಕಾನೂನಿನಲ್ಲಿ ಗೋಹತ್ಯೆ ಗೋಮಾಂಸ ಮಾರಾಟಕ್ಕೆ ಅವಕಾಶವಿಲ್ಲ. ಆದರೂ ಜಿಲ್ಲೆಯಲ್ಲಿ ನಿರಂತರವಾಗಿ ಗೋಹತ್ಯೆ ಗೋಮಾಂಸ ಮಾರಾಟ ಅಕ್ರಮ ಗೋಸಾಗಾಟ ನಡೆಯುತ್ತಿದೆ. ಕಾನೂನು ಬಾಹಿರ ಕೃತ್ಯಗಳನ್ನು ತಡೆಗಟ್ಟಬೇಕಾದ ಪೋಲೀಸ್ ಇಲಾಖೆ ಏನು ಮಾಡುತ್ತಿದೆ.?. ಕೇವಲ ಹಿಂದುಗಳ ಧಾರ್ಮಿಕ ಆಚರಣೆಗಳಾದ ಗಣೇಶೋತ್ಸವದ ದಸರಾ ಸಂದರ್ಭ ದಿಢೀರ್ ಕಾನೂನು ಪಾಲನೆ ನೆಪ ಹೇಳಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ಹೇರುವ ಪೋಲೀಸ್ ಇಲಾಖೆಯು ಜಿಲ್ಲೆಯಲ್ಲಿ ನಿರಂತರವಾಗಿ ಬಹುಸಂಖ್ಯಾತ ಹಿಂದುಗಳು ಪೂಜಿಸುವ ಗೋಮಾತೆಯ ಹತ್ಯೆ ನಡೆಯುತ್ತಿದ್ದರೂ ಅದನ್ನು ತಡೆಗಟ್ಟಲು ಸರಿಯಾದ ಕ್ರಮ ವಹಿಸದೇ ಇರುವುದು ಪೋಲೀಸರ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತಿದೆ.
ವಿಶೇಷವಾಗಿ ಕಾವೇರಿ ಸಂಕ್ರಮಣ ಸಮಯದಲ್ಲಿ ಕೊಡಗಿನಲ್ಲಿ ಗೋಹತ್ಯೆ ಗೋಮಾಂಸ ಮಾರಾಟ ಅಕ್ರಮ ಗೋಸಾಗಾಟ ನಿರಂತರವಾಗಿ ನಡೆಯುತ್ತಾ ಬಹುಸಂಖ್ಯಾತರ ಧಾರ್ಮಿಕ ನಂಬಿಕೆಗೆ ಘಾಸಿಯಾಗುತ್ತಿದ್ದರೂ ಸಹ ಸ್ಥಳೀಯ ಜನಪ್ರತಿನಿಧಿಗಳು ಪ್ರತಿಕ್ರಿಯೆ ನೀಡದೆ ಇರುವುದು ಮತ್ತು ಅಪರಾಧಗಳನ್ನು ತಡೆಗಟ್ಟಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡದೇ ಇರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿ ಸರಿಯಾದ BNS ಸೆಕ್ಷನ್ ಗಳಡಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೋಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದು ತಪ್ಪಿದ್ದಲ್ಲಿ ಹೋರಾಟ ಅನಿವಾರ್ಯವಾದೀತು ಎಂದು ಕುಕ್ಕೇರ ಅಜಿತ್ ತಿಳಿಸಿದ್ದಾರೆ.