ಬೆಂಗಳೂರು | ಎಟಿಎಂಗೆ ತುಂಬಲು ಹೋಗಿತ್ತಿದ್ದ ವಾಹನ ತಡೆದು 7.11 ಕೋಟಿ ರೂ. ದರೋಡೆ; ತಡವಾಗಿ ಮಾಹಿತಿ ನೀಡಿದ್ದೇಕೆ?

Nov 20, 2025 - 13:22
 0  916
ಬೆಂಗಳೂರು | ಎಟಿಎಂಗೆ ತುಂಬಲು ಹೋಗಿತ್ತಿದ್ದ ವಾಹನ ತಡೆದು 7.11 ಕೋಟಿ ರೂ. ದರೋಡೆ; ತಡವಾಗಿ ಮಾಹಿತಿ ನೀಡಿದ್ದೇಕೆ?
Photo credit: public tv

ಬೆಂಗಳೂರು, ನ.19: ಡೈರಿ ಸರ್ಕಲ್‌ ಫ್ಲೈಓವರ್ ಮೇಲೆ ಬುಧವಾರ ಮಧ್ಯಾಹ್ನ ಎಟಿಎಂ ಹಣ ಸಾಗಿಸುತ್ತಿದ್ದ ಸಿಎಂಎಸ್ ಸಂಸ್ಥೆಯ ವಾಹನದಿಂದ ಬರೋಬ್ಬರಿ 7.11 ಕೋಟಿ ರೂ. ದೋಚಿಕೊಂಡು ಗ್ಯಾಂಗ್ ಪರಾರಿಯಾದ ಘಟನೆ ಸಂಚಲನ ಮೂಡಿಸಿದೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರದಲ್ಲಿ ನಾಕಾಬಂಧಿ ಜಾರಿಯಲ್ಲಿದೆ.

ವಾಹನ ಚಾಲಕ ಬಿನೋದ್ ಹೇಳುವಂತೆ, ಇನ್ನೋವಾ ಕಾರಿನಲ್ಲಿ ಬಂದ ಐದು–ಆರು ಮಂದಿ ತಾವು ಆರ್‌ಬಿಐ ಅಧಿಕಾರಿಗಳು ಎಂದು ಹೇಳಿ ವಾಹನವನ್ನು ನಿಲ್ಲಿಸಿದರು. ಬಳಿಕ ವಾಹನದಲ್ಲಿದ್ದ ಮೂವರು ಸಿಬ್ಬಂದಿಯನ್ನು ತಮ್ಮ ಕಾರಿನಲ್ಲಿ ಹತ್ತಿಸಿಕೊಂಡು ಬೇರೆಡೆಗೆ ಕರೆದೊಯ್ದರು. ಚಾಲಕರನ್ನು ಮಾತ್ರ ಸಿಎಂಎಸ್ ವಾಹನದಲ್ಲೇ ಕರೆದುಕೊಂಡು ಹೋಗಿ ಡೈರಿ ಸರ್ಕಲ್ ಬ್ರಿಡ್ಜ್ ಮೇಲೆ ನಿಲ್ಲಿಸಿ, ಅವರ ಮೊಬೈಲ್ ಕಸಿದುಕೊಂಡು, ವಾಹನದಲ್ಲಿದ್ದ ನಗದನ್ನು ತಮ್ಮ ಕಾರಿಗೆ ವರ್ಗಾಯಿಸಿಕೊಂಡು ಪರಾರಿಯಾದರು.

ದರೋಡೆ 12:35ರ ಹೊತ್ತಿಗೆ ನಡೆದಿದ್ದರೂ, ಸಿಬ್ಬಂದಿಯ ಫೋನ್‌ಗಳನ್ನು ಕಸಿದುಕೊಂಡ ಕಾರಣ ಮಧ್ಯಾಹ್ನ 1:16ಕ್ಕೆ ಮಾತ್ರ ಕಚೇರಿಗೆ ಮಾಹಿತಿ ತಲುಪಿದೆ ಎಂದು ತಿಳಿದು ಬಂದಿದೆ.

ಸಂಸ್ಥೆಯ ಅಧಿಕಾರಿ ನಟರಾಜ್ ಹೇಳುವ ಪ್ರಕಾರ, ದರೋಡೆ ಮಧ್ಯಾಹ್ನ 12:30ರಿಂದ 1 ಗಂಟೆಯೊಳಗೆ ನಡೆದಿದೆ. ಜಿಪಿಎಸ್ ವ್ಯವಸ್ಥೆ ಇದ್ದರೂ ಸಿಬ್ಬಂದಿ ಬಂಧಿತರಾಗಿದ್ದರಿಂದ ಟ್ರ್ಯಾಕಿಂಗ್ ಕಷ್ಟವಾಗಿತ್ತು. ನಾಲ್ವರು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ದರೋಡೆಗೆ ಬಳಸಿದ ಇನ್ನೋವಾ ಕಾರಿನ ನಂಬರ್ KA 03 NC 8052 ಆಗಿತ್ತು. ಆದರೆ ವಾಸ್ತವವಾಗಿ ಅದು ಸ್ವಿಫ್ಟ್ VDI ಕಾರಿನ ನಕಲಿ ನಂಬರ್ ಆಗಿದೆ. ಈ ನಂಬರಿನ ಮೂಲ ದಾಖಲೆ ತಿಪ್ಪಸಂದ್ರ RTO ವ್ಯಾಪ್ತಿಯಲ್ಲಿ ಪಿ.ಬಿ. ಗಂಗಾಧರನ್ ಹೆಸರಿನಲ್ಲಿ ನೊಂದಾಯಿತಾಗಿದೆ. ಕಾರಿನ ಮೇಲೆ ‘Government of India’ ಎಂದು ಬರೆದಿತ್ತು ಎನ್ನಲಾಗಿದೆ.

ಘಟನೆಯ ಗಂಭೀರತೆಯನ್ನು ಪರಿಗಣಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ. ನಗರಾದ್ಯಂತ ನಾಕಾಬಂಧಿ ಜಾರಿಯಲ್ಲಿದ್ದು, ಶಂಕಿತರ ಫೋಟೋಗಳನ್ನು ಬಿಡುಗಡೆ ಮಾಡಿ ಎಲ್ಲ ತಪಾಸಣೆ ಪಾಯಿಂಟ್‌ಗಳಿಗೆ ಕಳುಹಿಸಲಾಗಿದೆ. ಕಳ್ಳರ ಬಗ್ಗೆ ಮಹತ್ವದ ಸುಳಿವುಗಳು ಸಿಕ್ಕಿವೆ ಎಂದು ಸಚಿವರು ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರಕಾರ, ಚಾಲಕ, ಇಬ್ಬರು ಗನ್‌ಮ್ಯಾನ್‌ಗಳು ಮತ್ತು ಮತ್ತೊಬ್ಬ ಸಿಬ್ಬಂದಿಯ ವಿಚಾರಣೆ ನಡೆಯುತ್ತಿದೆ. ಗಡಿಪ್ರದೇಶಗಳಲ್ಲಿ ಕಠಿಣ ನಾಕಾಬಂಧಿ ಜಾರಿಯಲ್ಲಿದೆ ಮತ್ತು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0