ಆಂಧ್ರ ಬಸ್ ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಬೆಂಗಳೂರಿನ ಟೆಕ್ಕಿ : ಕಿಟಕಿ ಒಡೆದು ಪಾರು, ಕಣ್ಣೆದುರಿಗೇ ಬೆಂಕಿಗಾಹುತಿಯಾದ ಪ್ರಯಾಣಿಕರು!

ಆಂಧ್ರ ಬಸ್ ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಬೆಂಗಳೂರಿನ ಟೆಕ್ಕಿ :   ಕಿಟಕಿ ಒಡೆದು ಪಾರು, ಕಣ್ಣೆದುರಿಗೇ ಬೆಂಕಿಗಾಹುತಿಯಾದ ಪ್ರಯಾಣಿಕರು!
ಫೋಟೋ: ವೇಣುಗೊಂಡ :photo credit: Tv09

ಬೆಂಗಳೂರು, ಅ. 24: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಕಾವೇರಿ ಟ್ರಾವೆಲ್ಸ್‌ ನ ವೋಲ್ವೊ ಬಸ್ ಅಪಘಾತದಲ್ಲಿ ಬೆಂಕಿಗಾಹುತಿಯಾದ ಪರಿಣಾಮ 20 ಮಂದಿ ಸಜೀವದಹನಗೊಂಡಿದ್ದಾರೆ. ಆದರೆ ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ವೇಣು ಗೊಂಡ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಸಹೋದರಿಯ ಮನೆಯಿಂದ ಬೆಂಗಳೂರಿಗೆ ಮರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಜೀವಂತವಾಗಿ ಪಾರಾದ ವೇಣು ಗೊಂಡ ತಮ್ಮ ಭೀಕರ ಅನುಭವವನ್ನು ಹಂಚಿಕೊಂಡಿದ್ದಾರೆ. 

“ನಾನು L-13 ಸೀಟ್‌ನಲ್ಲಿ ಕುಳಿತಿದ್ದೆ. ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಬಸ್ ಸ್ವಲ್ಪ ಸಮಯ ನಿಂತಿತ್ತು. ಪುನಃ ಚಲಿಸಲು ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ ಏಕಾಏಕಿ ಬಸ್‌ನ ಒಳಭಾಗದಲ್ಲಿ ಬೆಂಕಿ ಹೊತ್ತಿಕೊಂಡಿತು. ಹೊಗೆ ತುಂಬಿ ಉಸಿರಾಡಲೂ ಕಷ್ಟವಾಯಿತು. ಸಹ ಪ್ರಯಾಣಿಕನೊಬ್ಬ ಎಮರ್ಜೆನ್ಸಿ ಎಕ್ಸಿಟ್ ಕಿಟಕಿಯ ಗ್ಲಾಸ್ ಒಡೆದು ನಮ್ಮನ್ನು ಹೊರಗೆ ಕರೆತರಲು ನೆರವಾದರು. ಆತನ ಕೈಗೆ ಗಂಭೀರ ಗಾಯವಾಯಿತು,” ಎಂದು ಅವರು ವಿವರಿಸಿದ್ದಾರೆ.

ಬಸ್ ಮೊದಲು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ಬಾಂಬ್ ಸ್ಫೋಟದಂತ ಶಬ್ದದೊಂದಿಗೆ ಬೆಂಕಿ ಹೊತ್ತಿಕೊಂಡಿತು ಎಂದು ವೇಣು ತಿಳಿಸಿದ್ದಾರೆ.

 “ನಮ್ಮ ಕಣ್ಣೆದುರಿಗೇ ಪ್ರಯಾಣಿಕರು ಬೆಂಕಿಗಾಹುತಿಯಾಗುತ್ತಿರುವುದನ್ನು ನೋಡಬೇಕಾಯಿತು. ಏನೂ ಮಾಡಲು ಆಗದೆ ಬಸ್‌ನಿಂದ ಕೇವಲ ಐದು ಮೀಟರ್ ದೂರ ನಿಂತು ಆ ಭೀಕರ ದೃಶ್ಯವನ್ನು ನಾವು ನೋಡಬೇಕಾಯಿತು” ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.

ಘಟನೆಯ ಒಂದು ಗಂಟೆಯ ಬಳಿಕ ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿದ್ದು, ಆಗಾಗಲೇ ಹಲವರ ಜೀವ ಕಳೆದು ಹೋಗಿತ್ತು. ಬಳಿಕ ವೇಣು ಶಾಮೋಲಿ ಟ್ರಾವೆಲ್ಸ್‌ನ ಮತ್ತೊಂದು ಬಸ್ ಹತ್ತಿ ಬೆಂಗಳೂರಿಗೆ ಮರಳಿದ್ದಾರೆ.