ಭಾಗಮಂಡಲ;ಭಗಂಡೇಶ್ವರ ದೇವಸ್ಥಾನದಲ್ಲಿ ದೇವಿಯ ವಸಂತೋತ್ಸವದೂಂದಿಗೆ ತಾವೂರು ಮಹಿಷಾಸುರ ಮರ್ದಿನಿ ದೇವಿಯ ವಾರ್ಷಿಕ ಉತ್ಸವ

May 7, 2026 - 15:46
 0  201
ಭಾಗಮಂಡಲ;ಭಗಂಡೇಶ್ವರ ದೇವಸ್ಥಾನದಲ್ಲಿ ದೇವಿಯ ವಸಂತೋತ್ಸವದೂಂದಿಗೆ ತಾವೂರು ಮಹಿಷಾಸುರ ಮರ್ದಿನಿ ದೇವಿಯ ವಾರ್ಷಿಕ ಉತ್ಸವ

ಭಾಗಮಂಡಲ: ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಅವಭೃತ ಸ್ನಾನ, ಭಗಂಡೇಶ್ವರ ದೇವಸ್ಥಾನದಲ್ಲಿ ದೇವಿಯ ವಸಂತೋತ್ಸವದೂಂದಿಗೆ ತಾವೂರು ಮಹಿಷಾಸುರ ಮರ್ದಿನಿ ದೇವಿಯ ವಾರ್ಷಿಕ ಉತ್ಸವ ನೆರವೇರಿತು.

8 ದಿನಗಳು ನಡೆದ ಉತ್ಸವದಲ್ಲಿ ಅಂದಿ ಬೆಳಕು, ಮನೆಯಿಂದ ಭಂಡಾರ ತರುವುದು, ದೇವಿ ಬಲಿ ಉತ್ಸವ, ದೇವರ ದರ್ಶನ, ನೃತ್ಯಬಲಿ, ವಸಂತೋತ್ಸವ, ನೆರಪಿನ ಉತ್ಸವ, ಭಂಡಾರ ಕಾಣಿಕೆ, ಪ್ರಸಾದ ವಿತರಣೆ, ದೇವರ ಹರಕೆ ಸೇವೆಗಳು, ಅಂಬುಕಾಯಿ, ಎತ್ತು ಆರಾಟ, ಬೇಡುಕೋಲ, ಹರಕೆ ಸೇವೆಗಳು, ಶಯನೋತ್ಸವ, ಶುದ್ಧ ಕಲಸ, ಕಲಶಾಭಿಷೇಕ, ಮಂತ್ರಾಕ್ಷತೆ, ನಡೆಯಿತು.

   ಸಾವಿರಾರು ವರ್ಷಗಳ ಹಿಂದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ರೈತಾಪಿ ಕುಟುಂಕ್ಕೆ ಬೆಳಕಿನ ಆಕಾರದ ಶಕ್ತಿಯೊಂದು ಗೋಚರಿಸಿದೆ.

ಅ ಬೆಳಕನ್ನು ಹಿಂಬಾಲಿಸಿ ಹೋದಾಗ ಮಣ್ಣಿನಲ್ಲಿ ಹುದುಗಿ ಹೋಗಿದ್ದ ದೇವಿಯ ಮೂರ್ತಿ ವಿಗ್ರಹ ಒಂದು ಕಾಣಿಸುತ್ತದೆ.

 ವಿಶೇಷವಾಗಿ ವಿಗ್ರಹದ ಪಾದದ ಅಡಿಯಲ್ಲಿ ಮಹಿಷಾಸುರ ಸಂಹಾರದ ದೃಶ್ಯವೂ ಅಡಗಿರುತ್ತದೆ. ಹೀಗಾಗಿ ಈ ವಿಗ್ರಹಕ್ಕೆ ಮಹಿಷಾಸುರ ಮರ್ದಿನಿ ಎಂಬ ಹೆಸರನ್ನ ನೀಡಿ, ವಿಗ್ರಹ ಸಿಕ್ಕಿದ ಸ್ಥಳದಲ್ಲಿ 4 ಮರದ ಕಂಬಗಳನ್ನು ನೆಟ್ಟು ಸೊಪ್ಪಿನ ಚಪರವಾಗಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ.

ಹೀಗೆ ಈ ಸ್ಥಳದಲ್ಲಿ ದೇವಿಯ ಪೂಜೆ ಮುಂದುವರೆದು ಹುಲ್ಲಿನ ಹಾಸಿನ ಗರ್ಭಗುಡಿ ನಿರ್ಮಾಣವಾಗುತ್ತದೆ. ತದನಂತರದಲ್ಲಿ ಈ ಭಾಗದ ಸಮಾಂತನಾಗಿದ್ದ ಕರ್ಣಬಾಹು ಎಂಬುವನು ಮಣ್ಣಿನ ಗೋಡೆಗಳಿಂದ ದೇವಸ್ಥಾನವನ್ನು ನಿರ್ಮಿಸಿ ಗ್ರಾಮಸ್ಥರ ಆರಾಧನೆಗೆ ವ್ಯವಸ್ಥೆ ರೂಪಿಸುತ್ತಾನೆ ಎಂಬುವುದು ಇಲ್ಲಿನ ಜನರು ದೇವಸ್ಥಾನದ ವಿಚಾರವಾಗಿ ತಿಳಿಸುವ ಮಾಹಿತಿಯಾಗಿದೆ.

ಕ್ಷೇತ್ರದಲ್ಲಿ ಭಂಗಡೇಶ್ವರ ಮತ್ತು ಕಾವೇರಿ ಮಾತೆ ದೇವರ ಆರಾಧನೆ ಇದ್ದರೂ, ಮಣ್ಣಿನಲ್ಲಿ ಉದ್ಭವಿಸಿದ ಆ ದೇವಿಯ ಮೂರ್ತಿಯನ್ನೇ ಗ್ರಾಮ ದೇವತೆಯಾಗಿ ಪೂಜಿಸಿ ಇಷ್ಟಾರ್ಥ ಸಿದ್ದಿಗಳನ್ನು ಪಡೆದುಕೊಂಡು ಬದುಕಿನಲ್ಲಿ ನೆಮ್ಮದಿ ಕಂಡುಕೊಂಡಿರುವುದು ತಾವೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಭಕ್ತಿ ಆರಾಧನೆಯಾಗಿದೆ.

ಇಂತಹ ಧಾರ್ಮಿಕ ಇತಿಹಾಸವುಳ್ಳ ಭಾಗಮಂಡಲ ತಾವೂರು ಗ್ರಾಮದ ಮಹಿಷಾಸುರಮರ್ದಿನಿ ದೇವಿಯ ವಾರ್ಷಿಕ ಪೂಜೆಯಲ್ಲಿ ಮದುವೆಯಾದ ಹೆಣ್ಣು ಮಕ್ಕಳು ತವರೂರಿನ ದೇವರ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿ ಬಾಗವಾಹಿಸುತ್ತಾರೆ. 

ಗಂಡನ ಮನೆಯಲ್ಲಿ ಎದುರಾದ ಅನಾರೋಗ್ಯ ಇನ್ನಿತರ ಸಮಸ್ಯೆಗಳಿಗೆ ಹರಕೆ ಒಪ್ಪಿಸುವ ವಾಡಿಕೆ ಈ ಗ್ರಾಮ ದೇವರ ಮೇಲಿನ ಶಕ್ತಿಯನ್ನು ತಿಳಿಸುತ್ತದೆ.

ಊರಿನಲ್ಲಿ ಮತ್ತು ಕೊಟ್ಟ ಹೆಣ್ಣು ಮಕ್ಕಳ ಮನೆಯಲ್ಲಿ ಹಬ್ಬದಂದು ಸಾತ್ವಿಕ ಆಹಾರ ಪದಾರ್ಥ ಕಡುಂಬುಟ್ಟು, ತರಕಾರಿ ಪಲಹಾರ ಸೇವಿಸುವ ವಾಡಿಕೆಯು ಇದೆ.

ಹಬ್ಬವನ್ನು 12 ಮನೆತನಗಳಾದ ಅಮೆ, ಬಾರಿಕೆ, ಕೂಡಕಂಡಿ, ಹೊಸಗದ್ದೆ, ಕುದುಕುಳಿ, ಕುರಂಜಿ, ಚೆದುಕಾರು, ಕೋಳಿಬೈಲು, ಕಾವೇರಿ ಮನೆ, ಐಯ್ಯಣೀರ, ಗೌಡುಧಾರೆ ಕುಟುಂಬಗಳು ಹಬ್ಬವನ್ನು ನಡೆಸಿಕೊಟ್ಟರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೋಳಿಬೈಲು ಸಿ. ವೆಂಕಟೇಶ್, ಉಪಾಧ್ಯಕ್ಷ ಅಯ್ಯಣೀರ ಎ. ದಿನೇಶ್, ಕಾರ್ಯದರ್ಶಿ ಬಾರಿಕೆ ಎ. ತೀರ್ಥಕುಮಾರ್, ತಕ್ಕ ಮುಖ್ಯಸ್ಥ ಕುರುಂಜಿ ಸಿ. ದೇವಯ್ಯ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುದುಕುಳಿ ಸಿ. ಅಶ್ವತ್, ಖಜಾಂಚಿ ಹೊಸಗದ್ದೆ ಸಿ. ವೆಂಕಟರಮಣ, ತಾವೂರು ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಅಮೆ ಬಾಲಕೃಷ್ಣ, ದೇವಸ್ಥಾನದ ಆಡಳಿತ ಮಂಡಳಿ ಜೀರ್ಣೋದ್ಧಾರ ಸಮಿತಿ ಹಾಗೂ ಗ್ರಾಮಸ್ಥರು, ಇದ್ದರು.

ಬಾಕ್ಸ್: ಹಬ್ಬದ ಉತ್ಸಹದಲ್ಲಿ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿದರು.

ಗ್ರಾಮೀಣ ಭಾಗಗಳಲ್ಲಿ ದೇವಸ್ಥಾನಗಳಿರುವುದರಿಂದ ಅಲ್ಲಿನ ವಾತಾವರಣ ಶಾಂತಿಯುತವಾಗಿ ಇರಲು ಸಾಧ್ಯವಾಗುತ್ತದೆ. ಊರಿನವರು ಒಂದೆಡೆ ಸೇರಲು ಸಹ ಅನುಕೂಲವಾಗುತ್ತದೆ. ಧಾರ್ಮಿಕತೆಯನ್ನು ಎತ್ತಿ ಹಿಡಿಯಲು ದೇವಾಲಯಗಳ ನಿರ್ಮಾಣ ಉತ್ತಮ.

  ಮಹಿಷಾಸುರ ಮರ್ದಿನಿ ದೇವರ ಶಕ್ತಿ ಬಹಳ ವಿಶೇಷವಾಗಿದೆ. ಆ ಶಕ್ತಿ ಭಕ್ತಿಯಿಂದ ಮಾತ್ರ ಒಲಿಯುತ್ತದೆ. ಆ ನಿಟ್ಟಿನಲ್ಲಿ ದೇವಾಲಯದ ಪೂಜಾ ಕಾರ್ಯಗಳು ಭಕ್ತಿಯಿಂದ ಆರಾಧನೆ ಆಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗುಜರಾತ್ ರಾಜ್ಯ ಸಭಾ ಸದಸ್ಯ ಕೇಸರಿ ದೇವ್ ಸಿನ್ಹ್ ಝಾಲಾ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0