ಭಾಗಮಂಡಲ: ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ಹಾಗೂ ಪ್ರೌಢಶಾಲೆಯ 2026-27ನೇ ಸಾಲಿನ ಚಟುವಟಿಕೆಗಳಿಗೆ ಚಾಲನೆ ಮತ್ತು ವಿದ್ಯಾರ್ಥಿ ಸಂಘ ಉದ್ಘಾಟನೆ

Jul 16, 2026 - 19:34
 0  51
ಭಾಗಮಂಡಲ: ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ಹಾಗೂ ಪ್ರೌಢಶಾಲೆಯ 2026-27ನೇ ಸಾಲಿನ ಚಟುವಟಿಕೆಗಳಿಗೆ ಚಾಲನೆ ಮತ್ತು ವಿದ್ಯಾರ್ಥಿ ಸಂಘ ಉದ್ಘಾಟನೆ

ವಿರಾಜಪೇಟೆ : ಭಾರತವನ್ನು ವಿಶ್ವದ ಅತ್ಯಂತ ಶ್ರೇಷ್ಠ ಹಾಗೂ ಪೂರ್ಣ ಪ್ರಜಾಪ್ರಭುತ್ವ ದೇಶವಾಗಿ ರೂಪಿಸುವಲ್ಲಿ ವಿದ್ಯಾರ್ಥಿ ಪಾತ್ರ ಬಹುಮುಖ್ಯವಾಗಿದೆ ಎಂದು ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಕುಸುಮ ಅವರು ಅಭಿಪ್ರಾಯಪಟ್ಟರು.

ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಕಾಲೇಜಿನ 2026-27ನೇ ಚಟುವಟಿಕೆಗಳ ಚಾಲನೆ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶ ಸೇರಿದಂತೆ ಪ್ರಪಂಚದಲ್ಲಿನ ವಿದ್ಯಮಾನಗಳ ಕುರಿತು ನಮ್ಮಲ್ಲಿ ಅರಿವು ಇರಬೇಕು. ಜಗತ್ತಿನ ಅಸಾಧ್ಯವೆಂಬುದಿಲ್ಲ. ನಿರಂತರವಾಗಿ ಜ್ಞಾನವನ್ನು ಪ್ರತಿಯೊಬ್ಬರೂ ಹೆಚ್ಚಿಸಿಕೊಳ್ಳಬೇಕು. ಶಿಕ್ಷಣಕ್ಕೆ ಅಥವಾ ಜ್ಞಾನಾರ್ಜನೆಗೆ ಹಾಕಿದ ಬಂಡವಾಳ ಎಂದಿಗೂ ವ್ಯರ್ಥವಾಗಲ್ಲ. ಹುಟ್ಟುಸಾವು ನಮ್ಮ ಕೈಯಲ್ಲಿ ಇಲ್ಲದಿರಬಹುದು. ಆದರೆ ಅವೆರಡರ ನಡುವೆ ಜೀವನ ನಮ್ಮ ಕೈಯಲಿದೆ. ಆ ಜೀವನ ಸುಂದರವಾಗಿ ರೂಪಿಸಿಕೊಳ್ಳುವ ಕಾರ್ಯ ನಮ್ಮದಾಗಬೇಕು ಎಂದರು.

ದೌರ್ಬಲ್ಯಗಳೇ ನಮ್ಮ ಶಕ್ತಿಯಾದಾಗ ಸಾಧನೆ ಸುಲಭವಾಗುತ್ತದೆ. ಸಾಧನೆ ಹಾಗೂ ಬದುಕಿನ ಹಾದಿಯಲ್ಲಿ ಮಾನವೀಯ ಮೌಲ್ಯಗಳು ಬದುಕಿನಲ್ಲಿ ಇರಬೇಕು. ಕಾಲೇಜಿನ ದಿನಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ವಿದ್ಯಾರ್ಥಿಗಳು ತಮ್ಮ ನಾಯಕರ ಹಂತದಲ್ಲೆ ಬಗೆಹರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಹೇಮಂತ್ ಕುಮಾರ್ ಅವರು ಮಾತನಾಡಿ ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಸಂವಿಧಾನ ನೀಡಿರುವ ತಮ್ಮ ಮತದಾನದ ಹಕ್ಕನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸುವಂತೆ ಕಾಲೇಜಿನ ವಿದ್ಯಾರ್ಥಿಗಳನ್ನು ಮುನ್ನಡೆಸುವ ಹೊಣೆಗಾರಿಕೆ ವಿದ್ಯಾರ್ಥಿ ನಾಯಕರದ್ದಾಗಿದೆ. ಇದೇ ಮೊದಲ ಬಾರಿಗೆ ಕಾಲೇಜಿನ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಬಳಕೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ನೈಜ ಚುನಾವಣೆಯ ಅನುಭವ ಕಲ್ಪಿಸಿದ್ದು ಶ್ಲಾಘನೀಯ ಎಂದರು.

ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಹಿರಿಯ ನಿರ್ದೇಶಕ ರವೀಂದ್ರ ಹೆಬ್ಬಾರ್ ಅವರು ಮಾತನಾಡಿ ತಂದೆತಾಯಿಯರು ತಮ್ಮ ಬದುಕನ್ನು ಮಕ್ಕಳ ಭವಿಷ್ಯಕ್ಕಾಗಿ ಮುಡುಪಾಗಿಡುತ್ತಾರೆ. ಆ ತಂದೆ ತಾಯಿಯ ಕನಸನ್ನು ನನಸುಗೊಳಿಸುವುದು ವಿದ್ಯಾರ್ಥಿಗಳ ಕಾರ್ಯವಾಗಬೇಕು. ಬದುಕಿನಲ್ಲಿ ಗುರಿಯಿರಲಿ. ಆ ಗುರಿಯನ್ನು ಮುಟ್ಟುವ ತುಡಿತ ಪ್ರತಿಯೊಬ್ಬರಲ್ಲಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ಹ್ಯಾರಿಸ್ ಅವರು ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಲಿಯಾಗದೇ, ಪುಸ್ತಕ ಓದುವುದರತ್ತ ಹೆಚ್ಚಿನ ಗಮನಹರಿಸಬೇಕು ಎಂದರು. 

ಕಾಲೇಜಿನ ಆಡಳಿತ ಮೇಲ್ವಿಚಾರಕ ಕೀರ್ತಿ ಎಚ್.ಆರ್. ಗೌಡ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಅವಿನಾಶ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ದಾಮೋದರ್ ನಾಯ್ಕ್, ಗಿರಿಧರ್, ಡಾ. ಹೇಮಂತ್ ಕುಮಾರ್, ಪ್ರಮೀಳಾ ಸೇರಿದಂತೆ ಪ್ರೌಢಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಪದವಿ ಪೂರ್ವ ವಿಭಾಗದ ವಿದ್ಯಾರ್ಥಿ ನಾಯಕನಾಗಿ ಪ್ರಜ್ವಲ್ ಕೆ.ಕೆ, ಕಾರ್ಯದರ್ಶಿಯಾಗಿ ದರ್ಶಿನಿ ಕೆ.ಎಸ್, ಶಿಸ್ತು ನಾಯಕಿಯಾಗಿ ರಿಫಾ ಯು, ಕ್ರೀಡಾನಾಯಕನಾಗಿ ಹೇಮಂತ್ ಎಂ.ಎನ್, ಆರೋಗ್ಯ ಮತ್ತು ಸ್ವಚ್ಚತಾ ನಾಯಕಿಯಾಗಿ ಭುವನೇಶ್ವರಿ ಕೆ.ಜೆ. ಪ್ರೌಢಶಾಲಾ ವಿಭಾಗದ ನಾಯಕನಾಗಿ ಗಜೇಂದ್ರ ಕೆ.ಎಸ್, ಕಾರ್ಯದರ್ಶಿಯಾಗಿ ನಜಾ ಫಾತಿಮಾ, ಶಿಸ್ತುನಾಯಕನಾಗಿ ಭರತ್ ಎಚ್.ಆರ್, ಕ್ರೀಡಾನಾಯಕನಾಗಿ ವಿನಯ್ ಟಿ.ಎಸ್ ಹಾಗೂ ಆರೋಗ್ಯ ಮತ್ತು ಸ್ವಚ್ಚತಾ ನಾಯಕಿಯಾಗಿ ನಫಿದಾ ಪಿ.ಎ ಪ್ರತಿಜ್ಞಾವಿಧಿ ಸ್ವೀಕರಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0