ವಿಧವೆಯ ಖಾಸಗಿ ಫೋಟೋ ಹರಿಬಿಡುವುದಾಗಿ ಬ್ಲಾಕ್‌ಮೇಲ್; ಮೂವರ ವಿರುದ್ಧ ಪ್ರಕರಣ : ಗಾರ್ಮೆಂಟ್ಸ್ ಗೋಡೆಗೆ ಫೋಟೋ ಅಂಟಿಸುವುದಾಗಿ ಬೆದರಿಕೆ!

Oct 25, 2025 - 20:03
Oct 25, 2025 - 20:03
 0  1.8k
ವಿಧವೆಯ ಖಾಸಗಿ ಫೋಟೋ ಹರಿಬಿಡುವುದಾಗಿ ಬ್ಲಾಕ್‌ಮೇಲ್; ಮೂವರ ವಿರುದ್ಧ ಪ್ರಕರಣ :   ಗಾರ್ಮೆಂಟ್ಸ್ ಗೋಡೆಗೆ ಫೋಟೋ ಅಂಟಿಸುವುದಾಗಿ ಬೆದರಿಕೆ!
Photo credit: TV09

ಬೆಂಗಳೂರು, ಅ. 25: ವಿಧವೆ ಮಹಿಳೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ ಬ್ಲಾಕ್‌ಮೇಲ್ ಮಾಡಿದ ಘಟನೆಯೊಂದು ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

2021ರಲ್ಲಿ ಪತಿಯನ್ನು ಕಳೆದುಕೊಂಡು ನಾಲ್ಕು ವರ್ಷದ ಮಗಳೊಂದಿಗೆ ಬದುಕು ಸಾಗಿಸುತ್ತಿದ್ದ ಮಹಿಳೆ ಪತಿಯು ನಿರ್ವಹಿಸುತ್ತಿದ್ದ ಗಾರ್ಮೆಂಟ್ಸ್ ಘಟಕದ ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡುತ್ತಿದ್ದರು. ಈ ವೇಳೆ, 2025ರ ಫೆಬ್ರುವರಿಯಲ್ಲಿ ಚಂದ್ರಶೇಖರ್ ಎಂಬ ವ್ಯಕ್ತಿ ಸಹಾಯ ಮಾಡುವ ನೆಪದಲ್ಲಿ ಪರಿಚಯಗೊಂಡಿದ್ದಾನೆ. ಆರಂಭದಲ್ಲಿ ಸ್ನೇಹಿತನಂತಿದ್ದ ಆತ ನಂತರ ಮದುವೆಯಾಗೋಣ ಎಂದು ಹೇಳಿದ್ದಾನೆ. ಮಹಿಳೆ ತನಗೆ ಮಗುವಿದೆ ಎಂದು ಹೇಳಿದರೂ, ಜೊತೆಗೇ ಇರುವ ಎಂದು ಪುಸಲಾಯಿಸಿ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಎನ್ನಲಾಗಿದೆ.

ನಂತರ ಚಂದ್ರಶೇಖರ್ ಪತ್ನಿಯೆಂದು ಹೇಳಿಕೊಂಡು ಕವಿತಾ ಎಂಬ ಮಹಿಳೆ ಕರೆ ಮಾಡಿ “ನಿನಗೂ ನನ್ನ ಗಂಡನಿಗೂ ಏನು ಸಂಬಂಧ?” ಎಂದು ಗದರಿಸಿದ್ದಾಳೆ. ವಿಷಯ ತಿಳಿದ ಚಂದ್ರಶೇಖರ್, “ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ” ಎಂದು ಹೇಳಿ ಮತ್ತೆ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಎನ್ನಲಾಗಿದೆ. ಇದರ ಪರಿಣಾಮವಾಗಿ ಮಹಿಳೆ ಗರ್ಭಿಣಿಯಾಗಿದ್ದು, ಮಗು ಬೇಡವೆಂದು ಹೇಳಿದ ಆರೋಪಿ ಆಕೆಗೆ ಮಾತ್ರೆ ನೀಡಿ ಸೇವಿಸಲು ಒತ್ತಾಯಿಸಿದ್ದ. ಮಾತ್ರೆ ತೆಗೆದುಕೊಂಡ ಬಳಿಕ ಮಹಿಳೆಗೆ ತೀವ್ರ ಹೊಟ್ಟೆ ನೋವು ಹಾಗೂ ರಕ್ತಸ್ರಾವ ಉಂಟಾಗಿದೆ.

ಈ ವಿಚಾರದ ನಂತರ ಚಂದ್ರಶೇಖರ್, ಕವಿತಾ ಹಾಗೂ ಸಾಕಮ್ಮ ಎಂಬ ಮತ್ತೊಬ್ಬ ಮಹಿಳೆಯೂ ಸೇರಿ ಸಂತ್ರಸ್ತೆಯೊಂದಿಗೆ ಜಗಳವಾಡಿದ್ದು, ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಚಂದ್ರಶೇಖರ್ ಮತ್ತೊಮ್ಮೆ ಗಾರ್ಮೆಂಟ್ಸ್ ಬಳಿ ಬಂದು “ನಿನ್ನ ಅಶ್ಲೀಲ ಫೋಟೋಗಳು ನನ್ನ ಬಳಿ ಇವೆ, ದೂರು ನೀಡಿದರೆ ಅವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ” ಎಂದು ಬ್ಲಾಕ್‌ಮೇಲ್ ಮಾಡಿದ್ದಾನೆ. ಜೊತೆಗೆ ಜಾತಿ ನಿಂದನೆ ಮಾಡಿ, ಗಾರ್ಮೆಂಟ್ಸ್ ಗೋಡೆಗಳಿಗೆ ಆಕೆಯ ಫೋಟೋ ಅಂಟಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಎಲ್ಲಾ ಮಾನಸಿಕ ಹಿಂಸೆಯಿಂದ ಬೇಸತ್ತ ಸಂತ್ರಸ್ತೆ ಬ್ಯಾಡರಹಳ್ಳಿ ಠಾಣೆಗೆ ಭೇಟಿ ನೀಡಿ ಆರೋಪಿ ಚಂದ್ರಶೇಖರ್, ಕವಿತಾ ಹಾಗೂ ಸಾಕಮ್ಮ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0