State News

ಮಾರಿ ಹಬ್ಬಕ್ಕೆ ತೆರಳಿದ್ದ ಯುವಕನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

admincoorgdaily

Photo credit: TV09

ದಾವಣಗೆರೆ, ಜ.16: ಮಾರಿ ಹಬ್ಬ ವೀಕ್ಷಣೆಗೆಂದು ತೆರಳಿದ್ದ ಯುವಕನೊಬ್ಬನ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಸಮೀಪದ ತೋಟವೊಂದರಲ್ಲಿ ನಡೆದಿದೆ. ಬೈರನಹಳ್ಳಿ ಗ್ರಾಮದ ಚೇತನ್ (31) ಮೃತನಾಗಿದ್ದು, ಈ ಘಟನೆ ಕೊಲೆ ಪ್ರಕರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಕಳೆದ ಹತ್ತು ವರ್ಷಗಳಿಂದ ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಚೇತನ್, ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದ. ಮದುವೆಯ ನಿರೀಕ್ಷೆಯೊಂದಿಗೆ ಹೊನ್ನಾಳಿ ತಾಲ್ಲೂಕಿನ ಬೆನಕನಹಳ್ಳಿಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದನು. ಈ ನಡುವೆ ಕುಳಗಟ್ಟೆ ಗ್ರಾಮದಲ್ಲಿ ನಡೆದ ಮಾರಿ ಹಬ್ಬಕ್ಕೆ ಜ.5ರಂದು ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಚೇತನ್ ನಂತರ ನಾಪತ್ತೆಯಾಗಿದ್ದ.

ಅನಂತರ ಸಾಸ್ವೆಹಳ್ಳಿ ಸಮೀಪದ ಅಡಿಕೆ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿದ್ದ ಶವ ಪತ್ತೆಯಾಯಿತು. ದೇಹ ಸಂಪೂರ್ಣವಾಗಿ ಕರಕಲಾಗಿದ್ದರಿಂದ ಪ್ರಾಥಮಿಕವಾಗಿ ಮೃತನ ಗುರುತು ಪತ್ತೆ ಸಾಧ್ಯವಾಗಿರಲಿಲ್ಲ. ಸಂಬಂಧಿಯೊಬ್ಬರು ಶವವನ್ನು ಗುರುತಿಸಿದ ಬಳಿಕ ಅದು ಚೇತನ್‌ನದ್ದೇ ಎಂಬುದು ದೃಢಪಟ್ಟಿದೆ.

ಮೃತನು ಕೆಲಸ ಮಾಡುತ್ತಿದ್ದ ಹೋಟೆಲ್‌ ಊರಿನಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದು, ಹಬ್ಬದ ಸಂದರ್ಭದಲ್ಲೇ ಈ ದುರ್ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಚೇತನ್ ಜೊತೆ ಯಾರಿದ್ದರು, ಯಾವ ಕಾರಣಕ್ಕೆ ಈ ಕೃತ್ಯ ನಡೆದಿದೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.