ಸಿಎಂ ಮೈಸೂರು ಪ್ರವಾಸದ ನಡುವೆಯೇ ಸರಗೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆ

Dec 22, 2025 - 16:16
 0  419
ಸಿಎಂ ಮೈಸೂರು ಪ್ರವಾಸದ ನಡುವೆಯೇ ಸರಗೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆ

ಮೈಸೂರು, ಡಿ. 22: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಗೆ ಭೇಟಿ ನೀಡಿರುವ ಸಂದರ್ಭದಲ್ಲೇ ಸರಗೂರು ತಾಲೂಕು ಕಚೇರಿಗೆ ಆರ್‌ಡಿಎಕ್ಸ್ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಮಧ್ಯಾಹ್ನ 1 ಗಂಟೆಗೆ ಸ್ಫೋಟಗೊಳ್ಳಲಿದೆ ಎಂಬ ಎಚ್ಚರಿಕೆಯೊಂದಿಗೆ ಬಂದ ಇ-ಮೇಲ್ ಮಾಹಿತಿ ತಿಳಿದ ತಕ್ಷಣ ಪೊಲೀಸರು, ಬಾಂಬ್ ಪತ್ತೆ ದಳ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತಾಲೂಕು ಕಚೇರಿ ಆವರಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯ ನಡೆಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಸ್ಥಳದಿಂದ ತೆರವುಗೊಳಿಸಲಾಯಿತು. ಪರಿಶೀಲನೆಯ ಬಳಿಕ ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇ-ಮೇಲ್ ಸಂದೇಶದಲ್ಲಿ ತಮಿಳು ನಟ ಅಜಿತ್ ಕುಮಾರ್ ಅವರ ಹೆಸರನ್ನು ಉಲ್ಲೇಖಿಸಿರುವುದು ಗಮನ ಸೆಳೆದಿದ್ದು, ಬೆದರಿಕೆಯ ಮೂಲ ಪತ್ತೆಗೆ ಸೈಬರ್ ಅಪರಾಧ ವಿಭಾಗದಿಂದ ತನಿಖೆ ಆರಂಭಿಸಲಾಗಿದೆ.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗಳು ಮತ್ತು ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ಹುಸಿ ಬಾಂಬ್ ಬೆದರಿಕೆಗಳ ಸರಣಿ ಮುಂದುವರಿದಿದೆ. ಈ ಹಿಂದೆ ಕೋಲಾರ, ಗದಗ, ಭಟ್ಕಳ ಹಾಗೂ ತುಮಕೂರಿನ ಜಿಲ್ಲಾಡಳಿತ ಕಚೇರಿಗಳಿಗೆ ಬಂದಿದ್ದ ಇ-ಮೇಲ್ ಬೆದರಿಕೆಗಳೂ ನಂತರ ಹುಸಿಯೆಂದು ದೃಢಪಟ್ಟಿದ್ದವು.

ಇದೇ ಹಿನ್ನೆಲೆಯಲ್ಲೇ ಮೈಸೂರಿನ ಸರಗೂರು ತಾಲೂಕು ಕಚೇರಿಗೆ ಬಂದಿರುವ ಹೊಸ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ಪರಿಶೀಲನೆ ಹಾಗೂ ತನಿಖೆ ಮುಂದುವರಿಸಿದ್ದಾರೆ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಪಡಬೇಕಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0