ಪ್ರಿಯಕರನ ವಂಚನೆ ಬಹಿರಂಗ: ಠಾಣೆಯಲ್ಲೇ ತಾಳಿ ಕಿತ್ತೆಸೆದ ಯುವತಿ
ಚಿಕ್ಕಬಳ್ಳಾಪುರ, ಜ. 6: ಪ್ರೀತಿಸಿ ಮದುವೆಯಾಗಿದ್ದ ಪ್ರಿಯಕರನ ಹಿಂದಿನ ವಂಚನೆಗಳು ಹಾಗೂ ಅಪರಾಧ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ಬಹಿರಂಗವಾದ ಬಳಿಕ, ಯುವತಿಯೊಬ್ಬಳು ಆತ ಕಟ್ಟಿದ್ದ ತಾಳಿಯನ್ನು ಕಿತ್ತೆಸೆದು ಪೋಷಕರೊಂದಿಗೆ ಮನೆಗೆ ಮರಳಿದ ಘಟನೆ ಜಿಲ್ಲೆಯಲ್ಲಿಂದು ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ಬಡಾವಣೆಯ ನಿವಾಸಿ, ಪೇಂಟ್ ಕೆಲಸಗಾರ ಸಂದೀಪ್ ಎಂಬಾತನು ನಗರದ ಕಂದವಾರ ಬಡಾವಣೆಯ 18 ವರ್ಷದ ಯುವತಿಯನ್ನು ಪ್ರೀತಿಯ ಹೆಸರಿನಲ್ಲಿ ನಂಬಿಸಿ, ಎರಡು ದಿನಗಳ ಹಿಂದೆ ಮನೆಬಿಟ್ಟು ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಚಿಂತಾಮಣಿಯ ದೇವಸ್ಥಾನವೊಂದರಲ್ಲಿ ತಾಳಿಕಟ್ಟಿ ಮದುವೆಯಾಗಿದ್ದ ಈ ಜೋಡಿ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಮರಳುತ್ತಿದ್ದಾಗ, ಶಿಡ್ಲಘಟ್ಟ ಬಳಿ ಯುವತಿಯ ಪೋಷಕರು ವಾಹನವನ್ನು ಅಡ್ಡಗಟ್ಟಿದ್ದಾರೆ.
ಪೋಷಕರು ಯುವತಿ ಹಾಗೂ ಆಕೆಯ ಪ್ರಿಯಕರನನ್ನು ನೇರವಾಗಿ ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಠಾಣೆಯಲ್ಲಿ ಇಬ್ಬರೂ ತಾವು ಮದುವೆಯಾಗಿರುವುದಾಗಿ ತಿಳಿಸಿ, ತಮ್ಮ ಜೀವನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ವಿಚಾರಣೆ ಸಂದರ್ಭದಲ್ಲಿ ಸಂದೀಪ್‌ನ ಹಿಂದಿನ ಚಟುವಟಿಕೆಗಳು ಒಂದೊಂದಾಗಿ ಬೆಳಕಿಗೆ ಬಂದಿವೆ.
20024ರಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಯನಹಳ್ಳಿ ಗ್ರಾಮದ ಅಪ್ರಾಪ್ತ ಬಾಲಕಿಯೊಂದಿಗಿನ ಸಂಬಂಧ, ಮತ್ತೊಬ್ಬ ಮಹಿಳೆಗೆ ವಂಚನೆ ಮಾಡಿದ ಆರೋಪ ಹಾಗೂ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣಗಳ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ನಡುವೆ, ಸಂದೀಪ್‌ನಿಂದ ಹಿಂದೆ ಮೋಸಕ್ಕೊಳಗಾಗಿದ್ದ ಅಪ್ರಾಪ್ತೆಯೊಬ್ಬಳು ಠಾಣೆಗೆ ಹಾಜರಾಗಿ ಆತನ ವಿರುದ್ಧ ಹೇಳಿಕೆ ನೀಡಿದ್ದಾಳೆ.
ಪ್ರಿಯಕರನ ನಿಜ ಸ್ವರೂಪ ತಿಳಿದು ಆಘಾತಗೊಂಡ ಯುವತಿ, ಠಾಣೆಯಲ್ಲೇ ಆತ ಕಟ್ಟಿದ್ದ ತಾಳಿಯನ್ನು ಕಿತ್ತೆಸೆದು, ಆತನೊಂದಿಗೆ ಯಾವುದೇ ಸಂಬಂಧ ಇರಿಸಿಕೊಳ್ಳುವುದಿಲ್ಲ ಎಂದು ತಿಳಿಸಿ ಪೋಷಕರೊಂದಿಗೆ ಮನೆಗೆ ತೆರಳಿದ್ದಾಳೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.