ಮನೆಗೆ ನುಗ್ಗಿದ ದರೋಡೆಕೋರರನ್ನು ಕತ್ತಿ ಹಿಡಿದು ಹೆಮ್ಮೆಟ್ಟಿಸಿದ ಧೀರ ಮಹಿಳೆ! | ಚನ್ನಗಿರಿಯ ವೀರನಾರಿ ಸುಮಲತಾರ ಏಕಾಂಗಿ ಹೋರಾಟಕ್ಕೆ ದರೋಡೆಕೋರರು ಪರಾರಿ

Oct 14, 2025 - 19:17
 0  1.4k
ಮನೆಗೆ ನುಗ್ಗಿದ ದರೋಡೆಕೋರರನ್ನು ಕತ್ತಿ ಹಿಡಿದು ಹೆಮ್ಮೆಟ್ಟಿಸಿದ ಧೀರ ಮಹಿಳೆ! | ಚನ್ನಗಿರಿಯ ವೀರನಾರಿ ಸುಮಲತಾರ ಏಕಾಂಗಿ ಹೋರಾಟಕ್ಕೆ ದರೋಡೆಕೋರರು ಪರಾರಿ
Photo credit: Etv bharath

ದಾವಣಗೆರೆ, ಅ.14: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದಲ್ಲಿ ಒಂಟಿ ಮನೆಗೆ ನುಗ್ಗಿದ ದರೋಡೆಕೋರರ ವಿರುದ್ಧ ಗೃಹಿಣಿಯೊಬ್ಬರು ತೋರಿದ ಅಸಾಮಾನ್ಯ ಧೈರ್ಯ ಇದೀಗ ಸಾಮಾಜಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

 ಗೃಹಿಣಿ ಸುಮಲತಾ ಸತ್ಯನಾರಾಯಣ ರಾವ್ ಅವರು ತಮ್ಮ ಅತ್ತೆ ವೀರಯಮ್ಮ ಅವರೊಂದಿಗೆ ಮನೆಯಲ್ಲಿ ಇದ್ದಾಗ, ಮಾಸ್ಕ್ ಧರಿಸಿದ ಮೂವರು ದರೋಡೆಕೋರರು ಅಡಿಕೆ ತೋಟದಲ್ಲಿರುವ ಅವರ ಮನೆಗೆ ನುಗ್ಗಿದ್ದರು. ಕೈಯಲ್ಲಿ ಅಡಿಕೆ ಸುಲಿಯುವ ಕತ್ತಿ ಹಿಡಿದ ಕಳ್ಳರು ಮನೆಯಲ್ಲಿದ್ದ ಇಬ್ಬರು ಮಹಿಳೆಯರ ಮೇಲೆ ದಾಳಿ ನಡೆಸಿದರೂ, ಸುಮಲತಾ ಧೈರ್ಯದಿಂದಲೇ ಎದುರಿಸಿ ಕತ್ತಿ ಹಿಡಿದು ಹೋರಾಡಿದರು.

 ದರೋಡೆಕೋರರೊಂದಿಗಿನ ಘರ್ಷಣೆಯಲ್ಲಿ ನೆಲಕ್ಕೆ ಬಿದ್ದರೂ ಕತ್ತಿಯನ್ನು ಬಿಟ್ಟುಕೊಡದ ಸುಮಲತಾ, ಕಳ್ಳರ ಅಟ್ಟಹಾಸವನ್ನು ತಡೆದು ನಿಲ್ಲಿಸಿದರು. ಹೋರಾಟದ ವೇಳೆ ಅವರ ಕೈ ಹಾಗೂ ಕೊರಳಿಗೆ ಗಾಯಗಳಾಗಿದ್ದರೂ ಅವರು ಹಿಂಜರಿಯಲಿಲ್ಲ. ಕಳ್ಳರು ಕೊನೆಗೆ ವೀರಯಮ್ಮ ಅವರ ಚಿನ್ನದ ಸರ ಕಸಿದು ಪರಾರಿಯಾದರು. ನಂತರ ಪ್ರಕರಣ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡರು.

 ಚಿರಡೋಣಿ ಗ್ರಾಮದ ಶಿವಮೂರ್ತಿ, ರಮೇಶ್ ಹಾಗೂ ರುದ್ರೇಶ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ₹12.28 ಲಕ್ಷ ಮೌಲ್ಯದ ಎರಡು ಮಾಂಗಲ್ಯ ಸರಗಳು, ಬೆಳ್ಳಿಯ ಸಾಮಗ್ರಿಗಳು ಹಾಗೂ ಕೃತ್ಯಕ್ಕೆ ಬಳಸಿದ ಮಚ್ಚು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

"ಹೆಣ್ಣುಮಕ್ಕಳು ಯಾವ ಸಂದರ್ಭದಲ್ಲೂ ಹೆದರಬಾರದು. ಧೈರ್ಯದಿಂದ ಎದುರಿಸಿದರೆ ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ. ಗಂಡು ಮಕ್ಕಳು ಎಲ್ಲ ಸಮಯದಲ್ಲೂ ಮನೆಯಲ್ಲಿರೋದಿಲ್ಲ, ಆದ್ದರಿಂದ ಮಹಿಳೆಯರೂ ಶಕ್ತಿಯುತವಾಗಿ ನಿಲ್ಲಬೇಕು," ಎಂದು ವೀರನಾರಿ ಸುಮಲತಾ ಹೇಳಿದ್ದಾರೆ.

"ನಾನು ತೋಟದ ಔಟ್‌ಹೌಸ್‌ನಲ್ಲಿ ಇದ್ದ ಸಮಯದಲ್ಲಿ ಕಳ್ಳರು ಮನೆಗೆ ನುಗ್ಗಿದ್ದರು. ಪತ್ನಿಯು ಕತ್ತಿ ಹಿಡಿದು ಧೈರ್ಯವಾಗಿ ಎದುರಿಸಿದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಅವರ ಬೆರಳಿಗೆ ಎಂದು ಗಾಯಗಳಾಗಿವೆ," ಎಂದು ಸುಮಲತಾ ಅವರ ಪತಿ ಸತ್ಯನಾರಾಯಣ ರಾವ್ ಘಟನೆಯ ಬಗ್ಗೆ ವಿವರಿಸಿದರು.

 "ಬಂಧಿತ ಮೂವರು ಇದೇ ಗ್ರಾಮದವರಾಗಿದ್ದು, ಮನೆಯವರ ಚಲನವಲನ ಗಮನಿಸಿ ದರೋಡೆ ಯತ್ನಿಸಿದ್ದರು. ಈಗ ಅವರನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ," ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ತಿಳಿಸಿದ್ದಾರೆ.

What's Your Reaction?

Like Like 3
Dislike Dislike 0
Love Love 1
Funny Funny 0
Angry Angry 1
Sad Sad 3
Wow Wow 2