ದೇವನಹಳ್ಳಿಯಲ್ಲಿ ಟೋಲ್ ಬೂತ್‌ಗೆ ಬಸ್ ಡಿಕ್ಕಿ: ರಕ್ಷಣೆಯ ನೆಪದಲ್ಲಿ ಪ್ರಯಾಣಿಕರ ಮೊಬೈಲ್ ಕಳ್ಳತನ

ದೇವನಹಳ್ಳಿಯಲ್ಲಿ ಟೋಲ್ ಬೂತ್‌ಗೆ ಬಸ್ ಡಿಕ್ಕಿ:  ರಕ್ಷಣೆಯ ನೆಪದಲ್ಲಿ ಪ್ರಯಾಣಿಕರ ಮೊಬೈಲ್ ಕಳ್ಳತನ
Photo credit: TV09

ದೇವನಹಳ್ಳಿ, ಜ. 2: ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ–44ರ ದೇವನಹಳ್ಳಿ ಹೊರವಲಯದ ಟೋಲ್ ಪ್ಲಾಝಾ ಬಳಿ ಗುರುವಾರ ಖಾಸಗಿ ಸ್ಲೀಪರ್ ಕೋಚ್ ಬಸ್ ಟೋಲ್ ಬೂತ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ನಂತರ ಗಾಯಾಳುಗಳ ರಕ್ಷಣೆಗೆಂದು ಸ್ಥಳಕ್ಕೆ ಧಾವಿಸಿದವರಲ್ಲಿ ಕೆಲವರು ಪ್ರಯಾಣಿಕರ ಮೊಬೈಲ್‌ಗಳನ್ನು ಕಳ್ಳತನ ಮಾಡಿದ ಆರೋಪ ಕೇಳಿಬಂದಿದೆ.

ಹೈದರಾಬಾದ್‌ ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಅತಿವೇಗದಿಂದ ಸಂಚರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಳಕೆಯಲ್ಲಿರದ ಹಳೆಯ ಟೋಲ್ ಬೂತ್‌ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಜಖಂಗೊಂಡಿದ್ದು, ಟೋಲ್ ಬೂತ್ ಧ್ವಂಸಗೊಂಡಿದೆ. ಅಪಘಾತದ ವೇಳೆ ಟೋಲ್ ಪ್ಲಾಝಾ ಕಾರ್ಯನಿರ್ವಹಿಸುತ್ತಿರಲಿಲ್ಲ. ಬೂತ್ ಬಳಿ ಜನರು ಅಥವಾ ವಾಹನಗಳಿಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಸಂದರ್ಭದಲ್ಲಿ ಬಸ್‌ನಲ್ಲಿದ್ದ ಮೂವರು ಪ್ರಯಾಣಿಕರ ಐಫೋನ್ ಮೊಬೈಲ್‌ಗಳು ಕಳ್ಳತನವಾಗಿವೆ ಎಂದು ಆರೋಪಿಸಲಾಗಿದೆ.

ಅಪಘಾತದಲ್ಲಿ ಬಸ್ ಚಾಲಕ ಹಾಗೂ ಸಹಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಅವರನ್ನು ಬಸ್‌ನೊಳಗಿನಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತರ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ತುರ್ತು ನಿರ್ಗಮನ ದ್ವಾರ ಮೂಲಕ ಹೊರಬಂದಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರೇನ್ ಬಳಸಿ ಬಸ್ ಅನ್ನು ರಸ್ತೆ ಬದಿಗೆ ತೆರವುಗೊಳಿಸಲಾಗಿದೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ನಡೆದ ಪ್ರದೇಶದಲ್ಲಿ ಕೇವಲ 500 ಮೀಟರ್ ಅಂತರದಲ್ಲಿ ಎರಡು ಟೋಲ್ ಪ್ಲಾಜಾಗಳಿರುವುದು ವಾಹನ ಸವಾರರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಪೈಕಿ ಒಂದರಲ್ಲಿ ಎರಡು–ಮೂರು ವರ್ಷಗಳ ಹಿಂದೆಯೇ ಟೋಲ್ ವಸೂಲಿ ಸ್ಥಗಿತಗೊಂಡಿದ್ದರೂ, ಹಳೆಯ ಟೋಲ್ ಬೂತ್‌ಗಳನ್ನು ತೆರವುಗೊಳಿಸದೆ ಉಳಿಸಿರುವುದು ಅಪಘಾತಗಳ ಅಪಾಯವನ್ನು ಹೆಚ್ಚಿಸಿದೆ ಎಂಬ ಆರೋಪ ಕೇಳಿಬಂದಿದೆ.