ಮಹಿಳೆಯರು ಸ್ವಾವಲಂಬಿಗಳಾಗಲು ಚಾಂದಿನಿ ಅರುಣ್ ಮಾಚಯ್ಯ ಕರೆ; ಮಾಯಮುಡಿಯಲ್ಲಿ ಮಹಿಳಾ ದಿನಾಚರಣೆ

Mar 11, 2026 - 14:16
 0  532
ಮಹಿಳೆಯರು ಸ್ವಾವಲಂಬಿಗಳಾಗಲು  ಚಾಂದಿನಿ ಅರುಣ್ ಮಾಚಯ್ಯ ಕರೆ; ಮಾಯಮುಡಿಯಲ್ಲಿ ಮಹಿಳಾ ದಿನಾಚರಣೆ

ಗೋಣಿಕೊಪ್ಪ : ಮಹಿಳೆಯರು ಸ್ವಾವಲಂಬಿಗಳಾಗುವ ಮೂಲಕ ಸಮಾಜದಲ್ಲಿ ಆದರ್ಶದ ಬದುಕು ಕಟ್ಟಬೇಕು ಎಂದು ಸಮಾಜ ಸೇವಕಿ ಚಾಂದಿನಿ ಅರುಣ್ ಮಾಚಯ್ಯ ಕರೆಕೊಟ್ಟರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲ್ಲೂಕು ಕದಳಿ ವೇದಿಕೆ ಹಾಗೂ ಮಾಯಮುಡಿ ಗ್ರಾಮದ ಶ್ರೀ ಗಣೇಶ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ಮಾಯಮುಡಿಯ ಅಂಗನವಾಡಿ ಆವರಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು,

ದೇಶ ಸ್ವಾತಂತ್ರ್ಯ ಗಳಿಸಿ ಎಂಭತ್ತು ವರ್ಷಗಳಾಗುತ್ತಾ ಬಂದರೂ ಕೂಡ ಮಹಿಳೆ ಅಬಲೆಯಲ್ಲ - ಸಬಲಳು. ಸಮಾಜದ ನಾನಾ ಸ್ತರಗಳಲ್ಲಿ ಪುರುಷನಿಗಿಂತಲೂ ಒಂದು ಹೆಜ್ಜೆ ಮುಂದೆ ತನ್ನ ಶಕ್ತಿ, ಸಹನೆ, ಸಾಮರ್ಥ್ಯ ಗಳನ್ನು ಸಾಬೀತು ಪಡಿಸುತ್ತಿರುವ ದಿಟ್ಟ ಮಹಿಳೆ. ತೊಟ್ಟಿಲು ತೂಗುವ ಮಹಿಳೆಯ ಕೈ ಆಕಾಶದಲ್ಲಿ ವಿಮಾನ ಹಾರಿಸುವ, ಗಗನ ಯಾತ್ರೆ ನಡೆಸುವ ಮಹತ್ತರ ಪಾತ್ರಗಳಲ್ಲಿ ಮಂಚೂಣಿಯಲ್ಲಿದ್ದಾಳೆ ಎಂದರು.

ಮತ್ತೋರ್ವ ಅತಿಥಿ ಟಾಟು ಮೊಣ್ಣಪ್ಪ ಮಾತನಾಡಿ, ಮಹಿಳೆಯರಿಲ್ಲದ ಕುಟುಂಬಗಳನ್ನು ಊಹಿಸಲು ಅಸಾಧ್ಯ. ಕುಟುಂಬದ ಬೆಳಕು ಹಾಗೂ ಸಮಾಜದ ಕಣ್ಣಾದ ಮಹಿಳೆ ಹೆಜ್ಜೆ ಇಡಲಾರದ ರಂಗಗಳೇ ಇಲ್ಲ. ಶತಮಾನಗಳ ಹಿಂದೆ ಸಮಾಜದಲ್ಲಿ ಜೀವಂತವಾಗಿದ್ದ ಸತಿಸಹಗಮನ ಪದ್ದತಿಗೆ ಕೊಡಗು ಜಿಲ್ಲೆ ಹೊರತಾಗಿತ್ತು. ಪತಿ ಸಾವಿನ ನಂತರ ಮಹಿಳೆಯನ್ನು ಮತ್ತೆ ವಿವಾಹ ಮಾಡುವ ಮೂಲಕ ಅವಳಿಗೆ ಸ್ತ್ರೀ ಸ್ವಾತಂತ್ರ್ಯ ಕಲ್ಪಿಸಲಾಗಿತ್ತು.

ಮಹಿಳೆಯರನ್ನು ಇನ್ನಷ್ಟು ಆರ್ಥಿಕವಾಗಿ ಪ್ರಬಲರನ್ನಾಗಿಸಲು ಸರ್ಕಾರ ಮಹಿಳೆಯರಿಗೆಂದೇ ಹಲವು ಯೋಜನೆಗಳನ್ನು ಜಾರಿಗೊಳಿಸಿರುವುದರಿಂದ ಮಹಿಳೆಯರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಕರೆಕೊಟ್ಟರು. ಮಾಯಮುಡಿ ಕೆನರಾ ಬ್ಯಾಂಕಿನ ಮೆನೇಜರ್ ಪ್ರಿಯಾಂಕ ರಾಜ್ ಮಾತನಾಡಿ, ಮಹಿಳೆಯರು ಕೀಳರಿಮೆ ದೂರ ಮಾಡಿ ಮುಖ್ಯ ವಾಹಿನಿಯಲ್ಲಿ ಮುನ್ನುಗ್ಗಬೇಕು. ಮಹಿಳಾ ಸ್ವಸಹಾಯ ಸಂಘಗಳಿಗೆ ಬ್ಯಾಂಕುಗಳಿಂದ ದೊರಕುವ ಸಾಲ ಸೌಲಭ್ಯಗಳ ಪ್ರಯೋಜನ ಪಡೆದು ಉದ್ಯಮಿಗಳಾಗಲು ಆಶಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಪೊನ್ನಂಪೇಟೆ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಶೋಭಾರಾಣಿ, ಮಾಯಮುಡಿ ಪ್ರೌಢಶಾಲಾ ಶಿಕ್ಷಕಿ ಡಿ.ಯು. ರಾಗಿಣಿ ಮೋಹನ್ ಹಾಗೂ ನಿವೃತ್ತ ಶಿಕ್ಷಕಿ ಸುಬ್ಬಮ್ಮ ಮಾತನಾಡಿದರು. ಜಿಲ್ಲಾಡಳಿತದಿಂದ ಮಾದರಿ ಮಹಿಳೆ ಪ್ರಶಸ್ತಿಗೆ ಭಾಜನರಾದ ಶೋಭಾರಾಣಿ ಅವರನ್ನು ಗಣೇಶ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಅಭಿನಂದಿಸಿ ಗೌರವಿಸಿದರು. ಸ್ವಸಹಾಯ ಸಂಘದ ಪದಾಧಿಕಾರಿ ರಮುಲಾ ಸ್ವಾಗತಿಸಿದರು. ಜಯಲಕ್ಷ್ಮಿ ನಿರೂಪಿಸಿದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0