ಐಪಿಎಸ್ ಅಧಿಕಾರಿಯ ಮುಂದೆ ಚಿಕ್ಕಬಳ್ಳಾಪುರ ಪಿಎಸ್‌ಐ ಪಾಸ್ ದುರುಪಯೋಗ! 'ಟೋಲ್ ಫ್ರೀ' ಮಾಡಿಕೊಂಡ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು

Oct 15, 2025 - 23:33
Oct 15, 2025 - 23:33
 0  488
ಐಪಿಎಸ್ ಅಧಿಕಾರಿಯ ಮುಂದೆ ಚಿಕ್ಕಬಳ್ಳಾಪುರ ಪಿಎಸ್‌ಐ ಪಾಸ್ ದುರುಪಯೋಗ!  'ಟೋಲ್ ಫ್ರೀ' ಮಾಡಿಕೊಂಡ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು
Photo credit: X

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಅಮರ್ ಎಸ್. ಮುಗಳೆ ಅವರ ಹೆಸರಿನ ಪಾಸ್ ದುರುಪಯೋಗ ಮಾಡಿದ ಆರೋಪದ ಹಿನ್ನೆಲೆಯಲ್ಲಿ, ಚಿಕ್ಕಬಳ್ಳಾಪುರದ ಗುತ್ತಿಗೆದಾರ ಅಶೋಕ್ ವಿರುದ್ಧ ಪ್ರಕರಣ ದಾಖಲಾಗಿದೆ.

 ಈ ಕುರಿತು ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಐಪಿಎಸ್ ಅಧಿಕಾರಿ ಅರುಣ್ ಚಕ್ರವರ್ತಿ ಅವರು ಬೆಂಗಳೂರು ತಲಘಟ್ಟಪುರ ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.

ಮಾಹಿತಿಯ ಪ್ರಕಾರ, ಇತ್ತೀಚೆಗೆ ಅರುಣ್ ಚಕ್ರವರ್ತಿ ಅವರು ಚಿಕ್ಕಬಳ್ಳಾಪುರದ ನಂದಿಗಿರಿಧಾಮ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕಟ್ಟಡ ಮತ್ತು ಅದರ ಸುತ್ತಮುತ್ತಲಿನ ಉದ್ಯಾನ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದ್ದರು. ಆ ವೇಳೆ ಉದ್ಯಾನ ನಿರ್ಮಾಣ ಗುತ್ತಿಗೆಯನ್ನು ಅಶೋಕ್ ಎಂಬುವವರು ನಿರ್ವಹಿಸಿದ್ದರೆಂಬ ಮಾಹಿತಿ ಲಭಿಸಿತು.

 ಅಶೋಕ್ ಅವರು ತಾವು ನಿರ್ಮಿಸಿರುವ ಇತರ ಉದ್ಯಾನಗಳನ್ನು ತೋರಿಸಲು ಅರುಣ್ ಚಕ್ರವರ್ತಿ ಅವರನ್ನು ಜೆ.ಪಿ.ನಗರಕ್ಕೆ ಕರೆದುಕೊಂಡು ಹೋದರು. ಪ್ರಯಾಣದ ವೇಳೆ ನೈಸ್ ರೋಡ್ ಟೋಲ್ ಬಳಿ ಅಶೋಕ್ ಒಂದು ಕಾರ್ಡ್ ತೋರಿಸಿ ಟೋಲ್ ಪಾವತಿಯನ್ನು ತಪ್ಪಿಸಿದರು.

ಅರುಣ್ ಚಕ್ರವರ್ತಿ ಅವರ ಪ್ರಶ್ನೆಗೆ ಅಶೋಕ್ “ಎಂ.ಪಿ ಕಾರ್ಡ್” ಎಂದು ಉತ್ತರಿಸಿದರೂ, ಪರಿಶೀಲನೆಯ ವೇಳೆ ಆ ಕಾರ್ಡ್ “ಕರ್ನಾಟಕ ರಾಜ್ಯ ಪೊಲೀಸ್ – ಅಮರ್ ಎಸ್. ಮುಗಳೆ, ಪಿಎಸ್‌ಐ” ಎಂಬ ಹೆಸರಿನಲ್ಲಿರುವುದು ಪತ್ತೆಯಾಯಿತು. ಕಾರ್ಡ್‌ನಲ್ಲಿ ಕೆಜಿಐಡಿ ಸಂಖ್ಯೆ ಸಹ ಉಲ್ಲೇಖಿತವಾಗಿತ್ತು.

ಅಶೋಕ್ ನೀಡಿದ ವಿವರಣೆ ಸಮರ್ಪಕವಾಗಿರದ ಕಾರಣ, ಅರುಣ್ ಚಕ್ರವರ್ತಿ ಅವರು “ಪೊಲೀಸ್ ಅಧಿಕಾರಿಯ ಪಾಸ್‌ನ್ನು ಅನಧಿಕೃತವಾಗಿ ಉಪಯೋಗಿಸಿ, ಸರ್ಕಾರಿ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ಮೋಸ ಎಸಗಿರುವುದು ಗಂಭೀರ ಅಪರಾಧ” ಎಂದು ತಮ್ಮ ದೂರುದಲ್ಲಿ ತಿಳಿಸಿದ್ದಾರೆ.

ದೂರು ಆಧಾರವಾಗಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಕುರಿತು ತನಿಖೆ ಪ್ರಾರಂಭವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0