ನಿರ್ಮಾಣ ಹಂತದ ಕಟ್ಟಡದಿಂದ ಇಟ್ಟಿಗೆ ಬಿದ್ದು ಮಗು ಮೃತ್ಯು ಇಬ್ಬರು ಮಕ್ಕಳಿಗೆ ಗಾಯ; ನಿರ್ಲಕ್ಷ್ಯದ ಆರೋಪ

Dec 18, 2025 - 19:30
Dec 19, 2025 - 09:23
 0  995
ನಿರ್ಮಾಣ ಹಂತದ ಕಟ್ಟಡದಿಂದ ಇಟ್ಟಿಗೆ ಬಿದ್ದು ಮಗು ಮೃತ್ಯು  ಇಬ್ಬರು ಮಕ್ಕಳಿಗೆ ಗಾಯ; ನಿರ್ಲಕ್ಷ್ಯದ ಆರೋಪ
Photo credit: TV09

ಬೆಂಗಳೂರು, ಡಿ. 18: ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾಲೋ ಬ್ರಿಕ್ಸ್‌ಗಳು ಕೆಳಗೆ ಬಿದ್ದ ಪರಿಣಾಮ ನಾಲ್ಕು ವರ್ಷದ ಮಗು ಸಾವನ್ನಪ್ಪಿದ ಘಟನೆ ಎಚ್‌ಎಎಲ್‌ನ ಚಿನ್ನಪ್ಪನಹಳ್ಳಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಇದೇ ಘಟನೆಯಲ್ಲಿ ಇನ್ನಿಬ್ಬರು ಮಕ್ಕಳು ಗಾಯಗೊಂಡಿದ್ದಾರೆ.

ಮೃತ ಮಗುವನ್ನು ಮನಸ್ವಿ (4) ಎಂದು ಗುರುತಿಸಲಾಗಿದೆ. ಗಾಯಗೊಂಡ ಶ್ರಿಯನ್ (6) ಹಾಗೂ ಶೇಖರ್ (5) ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ಮೂಲದ ಕುಟುಂಬವೊಂದು ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿದ್ದ ಸಿಮೆಂಟ್ ಶೀಟ್‌ ಶೆಡ್‌ನಲ್ಲಿ ವಾಸವಾಗಿತ್ತು. ಮಧ್ಯಾಹ್ನ ವೇಳೆ ಕಟ್ಟಡದ ಮೇಲ್ಮಹಡಿಯಿಂದ ಏಕಾಏಕಿ ಇಟ್ಟಿಗೆಗಳು ಬಿದ್ದಿದ್ದು, ಶೆಡ್ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಮಂಚದ ಮೇಲೆ ಇದ್ದ ಮಗುವಿನ ಮೇಲೆ ಇಟ್ಟಿಗೆಗಳು ಬಿದ್ದ ಪರಿಣಾಮ ಮನಸ್ವಿ ಸ್ಥಳದಲ್ಲೇ ಮೃತಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

ನಿರ್ಮಾಣ ಹಂತದ ಕಟ್ಟಡವು ಸುಬ್ಬಾರಾವ್ ಎಂಬುವರಿಗೆ ಸೇರಿದ್ದು, ನಿರ್ಮಾಣ ಸಂದರ್ಭದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಘಟನಾ ಸ್ಥಳಕ್ಕೆ ಹೆಚ್‌ಎಎಲ್ ಪೊಲೀಸ್‌ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0