ಚಿತ್ರದುರ್ಗ | ಬಸ್ ಗೆ ಲಾರಿ ಡಿಕ್ಕಿ; ಭೀಕರ ರಸ್ತೆ ಅಪಘಾತಕ್ಕೆ ಹೊತ್ತಿ ಉರಿದ ಖಾಸಗಿ ಸ್ಲೀಪರ್ ಕೋಚ್; 6 ಪ್ರಯಾಣಿಕರು ಸಜೀವ ದಹನ

Dec 25, 2025 - 07:46
Dec 26, 2025 - 08:55
 0  1.6k
ಚಿತ್ರದುರ್ಗ | ಬಸ್ ಗೆ  ಲಾರಿ ಡಿಕ್ಕಿ; ಭೀಕರ ರಸ್ತೆ ಅಪಘಾತಕ್ಕೆ ಹೊತ್ತಿ ಉರಿದ ಖಾಸಗಿ ಸ್ಲೀಪರ್ ಕೋಚ್; 6 ಪ್ರಯಾಣಿಕರು ಸಜೀವ ದಹನ

ಚಿತ್ರದುರ್ಗ, ಡಿ.25: ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ  6 ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಲಾರಿಯೊಂದು ಡಿವೈಡರ್ ದಾಟಿ ಎದುರುಗಡೆಯಿಂದ ಬರುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದು ಈ ದುರ್ಘಟನೆ ಸಂಭವಿಸಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಕ್ಕಿಯ ತೀವ್ರತೆಯಿಂದ ಬಸ್ ರಸ್ತೆ ಮಧ್ಯೆಯಲ್ಲೇ ಬೆಂಕಿಗಾಹುತಿಯಾದಿತು. ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಿದ್ದರಿಂದ ಬಸ್‌ನೊಳಗಿದ್ದ ಹಲವು ಪ್ರಯಾಣಿಕರು ಹೊರಬರಲು ಸಾಧ್ಯವಾಗದೆ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಲಾರಿ ಹಿರಿಯೂರಿನಿಂದ ಬೆಂಗಳೂರಿನತ್ತ ಸಾಗುತ್ತಿದ್ದರೆ, ಖಾಸಗಿ ಬಸ್ ಬೆಂಗಳೂರಿನಿಂದ ಶಿವಮೊಗ್ಗದತ್ತ ಬರುತ್ತಿತ್ತು ಎಂದು ತಿಳಿದು ಬಂದಿದೆ. 

ಗಾಯಾಳುಗಳನ್ನು ಸಮೀಪದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.

ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಸುಮಾರು 30 ಕಿಲೋಮೀಟರ್‌ವರೆಗೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಶಿರಾವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪೊಲೀಸರು ಮತ್ತು ಹೆದ್ದಾರಿ ಸಿಬ್ಬಂದಿ ಸಂಚಾರವನ್ನು ಹಂತಹಂತವಾಗಿ ಪುನಃಸ್ಥಾಪಿಸಿದರು. 

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಪಘಾತದ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 10
Wow Wow 0