ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್  ಭರ್ಜರಿ ಚಾಲನೆ; ಧ್ವಜಾರೋಹಣ, ಟ್ರೋಫಿ ಅನಾವರಣದಿಂದ ಉದ್ಘಾಟನೆ

Apr 10, 2026 - 19:50
 0  448
ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್  ಭರ್ಜರಿ ಚಾಲನೆ;  ಧ್ವಜಾರೋಹಣ, ಟ್ರೋಫಿ ಅನಾವರಣದಿಂದ ಉದ್ಘಾಟನೆ

ಸಿದ್ದಾಪುರ:ಸಿಜೆ ಬಿಲ್ಡ್‌ವೇರ್ ಪ್ರಸ್ತುತಿಯಲ್ಲಿ ಐಪಿಎಲ್ ಮಾದರಿಯಲ್ಲಿ ಆಯೋಜಿಸಲಾಗುತ್ತಿರುವ ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಆವೃತ್ತಿ–1ರ ಕ್ರಿಕೆಟ್ ಕ್ರೀಡಾಕೂಟಕ್ಕೆ ಶುಕ್ರವಾರ ಭರ್ಜರಿ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಅತಿಥಿಗಳಿಂದ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಆಕರ್ಷಕ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಕ್ರೀಡೆ ಪರಸ್ಪರ ಬಾಂಧವ್ಯವನ್ನು ಬೆಳೆಸುವ ಪ್ರಮುಖ ಮಾಧ್ಯಮವಾಗಿದ್ದು, ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿನ ಎಲ್ಲಾ ಸಮುದಾಯಗಳು ಯುವಕರನ್ನು ಒಗ್ಗೂಡಿಸಲು ಕ್ರೀಡೆಯನ್ನು ಆಯ್ಕೆ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು. ರೋಮನ್ ಕ್ಯಾಥೋಲಿಕ್ ಸಮುದಾಯದ ಯುವಕರನ್ನು ಒಂದೇ ವೇದಿಕೆಯಲ್ಲಿ ತರಲು ಈ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಸಂತ ಮರಿಯಮ್ಮ ಚರ್ಚ್ ಧರ್ಮಗುರು ಫಾ. ಜೋಸೆಫ್ ವಳ್ಳಿಯ ಪರಂಬುಲ ಮಾತನಾಡಿ, ಈ ಕ್ರೀಡಾಕೂಟ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು, ಆಟಗಾರರು ತಮ್ಮ ಶ್ರೇಷ್ಠತೆಯನ್ನು ತೋರಿಸಿ ನ್ಯಾಯಯುತವಾಗಿ ಆಟವಾಡಬೇಕು. ಪ್ರತಿಯೊಂದು ಪಂದ್ಯವನ್ನು ಆನಂದಿಸಿ ಪರಸ್ಪರ ಗೌರವದಿಂದ ಸ್ಪರ್ಧಿಸುವುದು ಮುಖ್ಯ ಎಂದು ಸಲಹೆ ನೀಡಿದರು.

ರೋಮನ್ ಕ್ಯಾಥೋಲಿಕ್ ಸಂಘದ ಅಧ್ಯಕ್ಷ ಜಾನ್ಸನ್ ಪಿಂಟೋ ಮಾತನಾಡಿ, ಈ ಕ್ರೀಡಾಕೂಟ ಸಮಾಜದ ಒಗ್ಗೂಡಿಕೆಗೆ ಉತ್ತಮ ವೇದಿಕೆಯಾಗಿದ್ದು, ಇಂತಹ ಕಾರ್ಯಕ್ರಮಗಳು ಕೊಡಗಿನಲ್ಲಿ ಇನ್ನಷ್ಟು ನಡೆಯಬೇಕು ಎಂದರು.

ರೋಟರಿ ಸದಸ್ಯ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ವೆಂಕಟೇಶ್ ಮಾತನಾಡಿ, ಯುವಕರಲ್ಲಿ ಕ್ರೀಡಾ ಮನೋಭಾವನೆ ಮತ್ತು ಆರೋಗ್ಯ ಕಾಪಾಡುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್, ಸಿದ್ದಾಪುರದ ಸಂತ ಮೇರೀಸ್ ಆರ್ಥೋಡಾಕ್ಸ್ ಸಿರಿಯನ್ ಚರ್ಚ್‌ನ ಫಾದರ್ ಮಥಾಯಿ, ಬಿಜಿಎಸ್ ಶಾಲೆಯ ಅಚ್ಚಯ್ಯ, ಕ್ರೈಸ್ತ ಸಂಘದ ರಾಬಿನ್, ಸಭಾಸ್ಟಿನ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ, ಜಾನಪದ ಪರಿಷತ್ ವಿರಾಜಪೇಟೆ ತಾಲೂಕು ಅಧ್ಯಕ್ಷ ಟೋಮಿ ತೋಮಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0