ಪ್ರೀತಿ ನಿರಾಕರಿಸಿದ ಕಾಲೇಜು ವಿದ್ಯಾರ್ಥಿನಿಯ ಹತ್ಯೆ: 24 ಗಂಟೆಯೊಳಗೆ ಹಂತಕ ಬಂಧನ| ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಹತ್ಯೆಗೆ ಸಂಚು!

Oct 18, 2025 - 00:58
 0  2.1k
ಪ್ರೀತಿ ನಿರಾಕರಿಸಿದ ಕಾಲೇಜು ವಿದ್ಯಾರ್ಥಿನಿಯ ಹತ್ಯೆ: 24 ಗಂಟೆಯೊಳಗೆ ಹಂತಕ ಬಂಧನ|   ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಹತ್ಯೆಗೆ ಸಂಚು!

ಬೆಂಗಳೂರು, ಅ.17:ನಗರದ ಯುವತಿ ಯಾಮಿನಿ ಪ್ರಿಯಾ (20) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇವಲ 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರೀತಿ ನಿರಾಕರಿಸಿದ್ದಕ್ಕೆ ವಿಶ್ವೇಶ್ ಎಂಬ ಯುವಕ ಈ ಹತ್ಯೆಗೈದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

 ಅ.16ರಂದು ಸಂಜೆ ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯಾಮಿನಿ ಪ್ರಿಯಾ ಮಂತ್ರಿಮಾಲ್ ಹಿಂಭಾಗದ ರೈಲ್ವೆ ಟ್ರ್ಯಾಕ್ ಬಳಿ ತಲುಪುತ್ತಿದ್ದಾಗ, ಆರೋಪಿ ವಿಶ್ವೇಶ್ ಆಕೆಯನ್ನು ತಡೆದು ಕಣ್ಣಿಗೆ ಖಾರದಪುಡಿ ಎರಚಿ ಕತ್ತು ಕೊಯ್ದು ಸ್ಥಳದಲ್ಲೇ ಕೊಲೆಗೈದಿದ್ದಾನೆ. ಬಳಿಕ ವಿಶ್ವೇಶ್ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.

ಘಟನೆಯ ನಂತರ ಶ್ರೀರಾಂಪುರ ಠಾಣಾ ಪೊಲೀಸರು ತಕ್ಷಣ ಶೋಧ ಕಾರ್ಯಾಚರಣೆ ಆರಂಭಿಸಿ, ಆರೋಪಿಯ ಮೊಬೈಲ್ ಟ್ರ್ಯಾಕ್ ಮಾಡಿ ಆತನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು. ಶುಕ್ರವಾರ ಸೋಲದೇವನಹಳ್ಳಿಯಲ್ಲಿ ವಿಶ್ವೇಶ್ ಬಂಧನಕ್ಕೊಳಗಾಗಿದ್ದಾನೆ. ಪ್ರಸ್ತುತ ವಿಚಾರಣೆ ಮುಂದುವರಿದಿದೆ.

 ‘ಮಿಷನ್ ಯಾಮಿನಿ ಪ್ರಿಯಾ’ ವಾಟ್ಸಪ್ ಗ್ರೂಪ್‌ನಲ್ಲಿ ಸಂಚು

 ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಆರೋಪಿಯು ‘ಮಿಷನ್ ಯಾಮಿನಿ ಪ್ರಿಯಾ’ ಎಂಬ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ಸೃಷ್ಟಿಸಿ, ಯುವತಿಯ ಚಲನವಲನಗಳ ಬಗ್ಗೆ ನಿಗಾವಹಿಸುತ್ತಿದ್ದಾನೆ ಎಂಬುದು ಪತ್ತೆಯಾಗಿದೆ. ಈ ಗ್ರೂಪ್‌ನಲ್ಲಿ ನಾಲ್ವರು ಸದಸ್ಯರಿದ್ದು, ಹತ್ಯೆಗೆ ಮುನ್ನ ಯೋಜನೆ ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಲವಂತವಾಗಿ ಮಾಂಗಲ್ಯ ಕಟ್ಟಿದ್ದ ಆರೋಪಿ ವಿಶ್ವೇಶ್ ಹಿಂದೆ ಯಾಮಿನಿ ಪ್ರಿಯಾಗೆ ಬಲವಂತವಾಗಿ ಮಾಂಗಲ್ಯ ಕಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಕುಟುಂಬವು ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದಲೇ ಆರೋಪಿಯು ಪ್ರತೀಕಾರದ ಮನೋಭಾವದಿಂದ ಹತ್ಯೆಗೈದಿರುವ ಸಾಧ್ಯತೆ ವ್ಯಕ್ತವಾಗಿದೆ.

What's Your Reaction?

Like Like 4
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0