State News

ಮೈಸೂರು ಅರಮನೆ ಮುಂಭಾಗ ಸಿಲಿಂಡರ್ ಸ್ಫೋಟ; ಸಾವಿನ ಸಂಖ್ಯೆ 2ಕ್ಕೆ ಏರಿಕೆ; ಪ್ರಕರಣದ ಸುತ್ತ ಅನುಮಾನದ ಹುತ್ತ

admincoorgdaily

Photo credit: TV09

ಮೈಸೂರು, ಡಿ.26: ಕ್ರಿಸ್ಮಸ್ ಹಬ್ಬದ ದಿನ ಮೈಸೂರು ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.

ಡಿ.25ರಂದು ಅರಮನೆಯ ಜಯಮಾರ್ತಂಡ ದ್ವಾರದ ಬಳಿ ಉತ್ತರ ಪ್ರದೇಶ ಮೂಲದ ಸಲೀಂ (40) ಎಂಬಾತ ಬಲೂನ್ ಮಾರಾಟ ಮಾಡುತ್ತಿದ್ದ ವೇಳೆ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ಸಲೀಂ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ನಾಲ್ವರು ಗಾಯಗೊಂಡಿದ್ದರು. ಗಾಯಾಳುಗಳಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಮಂಜುಳಾ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಯ ವೇಳೆ ಅರಮನೆ ಆವರಣ ಹಾಗೂ ಸುತ್ತಮುತ್ತ ಪ್ರವಾಸಿಗರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಪ್ರಕರಣದ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ. ಮೃತ ಸಲೀಂ ಕೇವಲ 15 ದಿನಗಳ ಹಿಂದಷ್ಟೇ ಮೈಸೂರಿಗೆ ಬಂದು ಬಲೂನ್ ಮಾರಾಟ ಆರಂಭಿಸಿದ್ದ ಎನ್ನಲಾಗಿದೆ. ಈ ಅವಧಿಯಲ್ಲಿ ಆತ ಲಾಡ್ಜ್‌ನಲ್ಲಿ ವಾಸಿಸುತ್ತಿದ್ದನೆಂಬ ಮಾಹಿತಿ ಲಭ್ಯವಾಗಿದ್ದು, ಅಲ್ಪ ಆದಾಯದ ಬಲೂನ್ ವ್ಯಾಪಾರಿಯಿಂದ ಇಷ್ಟು ದಿನ ಲಾಡ್ಜ್‌ನಲ್ಲಿ ತಂಗುವಷ್ಟು ಆರ್ಥಿಕ ಸಾಮರ್ಥ್ಯ ಸಾಧ್ಯವೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಸಿಲಿಂಡರ್‌ನ ಮೂಲ, ಅದರ ಬಳಕೆ, ಹಾಗೂ ಸಲೀಂನ ಹಿನ್ನೆಲೆ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ತಿಳಿಯಲು ತಾಂತ್ರಿಕ ಪರಿಶೀಲನೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.